5 ಕೋಟಿ ರೂ. ಮೌಲ್ಯದ ಹಳೇ ನೋಟುಗಳ ವಶ, ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Old-Notes-Bengaluru

ಬೆಂಗಳೂರು, ಮಾ.21-ಅಮಾನ್ಯಗೊಂಡ ಹಳೇ ನೋಟುಗಳನ್ನು ಹೊಸ ನೋಟುಗಳನ್ನಾಗಿ ಬದಲಿಸುವ ಯೋಜನೆ ರೂಪಿಸುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಐದು ಕೋಟಿ ರೂ. ಮೌಲ್ಯದ ಹಳೇ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರ ಹಾಗೂ ಶಂಕರಪುರದಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬಂಧಿತರಿಂದ 3 ಕಾರು, 4 ಮೊಬೈಲ್‍ಗಳನ್ನು ಸಹ ವಶಕ್ಕೆ ತೆಗೆದುಕೊಂಡಿದ್ದಾರೆ.  ರಾಜಾಜಿನಗರದ ಶಿವಾಲಿ ಲಾಡ್ಜ್ ಬಳಿ ದಾಳಿ ನಡೆಸಿ ಜಯನಗರ ವಾಸಿ ಅಂಬ್ರೋಸ್(42), ನ್ಯೂ ಗುರುಪ್ಪನಪಾಳ್ಯದ ಆರೀಫ್‍ಪಾಷ (34) ಮತ್ತು ಕೇರಳದ ಫೇಲಿಕ್ಸ್ (35) ಎಂಬುವರನ್ನು ಬಂಧಿಸಿದ್ದಾರೆ.

ಇವರಿಂದ 1.98 ಕೋಟಿ ರೂ. ಮೌಲ್ಯದ 500 ಹಾಗೂ 1000 ರೂ. ಮುಖಬೆಲೆಯ ಹಳೇ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.  2 ಕಾರು, 3 ಮೊಬೈಲ್‍ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಅರುಣ್ ಮತ್ತು ಮಂಜುನಾಥ್ ಎಂಬುವರು ಪರಾರಿಯಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ಅವರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.  ಡಿಸಿಪಿ ಎಚ್.ಡಿ.ಆನಂದ್ ಅವರ ಮಾರ್ಗದರ್ಶನದಲ್ಲಿ ಎಸಿಪಿ ಎಚ್.ಎಂ.ಮಹದೇವಪ್ಪ , ಇನ್ಸ್‍ಪೆಕ್ಟರ್ ರಾಜು ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.

ಶಂಕರಪುರದ ಬುಲ್‍ಟೆಂಪಲ್ ರಸ್ತೆಯಲ್ಲಿರುವ ಮರಾಠ ಹಾಸ್ಟೆಲ್ ಕಾಂಪೌಂಡ್ ಬಳಿ ಕಾರ್ಯಾಚರಣೆ ನಡೆಸಿ ಶಾಂತಿನಗರ ವಾಸಿ ನಂಜುಂಡ (46) ಎಂಬಾತನನ್ನು ಬಂಧಿಸಿ 3 ಕೋಟಿ ರೂ. ಮೌಲ್ಯದ ಹಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈತನಿಂದ ಒಂದು ಕಾರು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.  ಕಾರ್ಯಾಚರಣೆಯಲ್ಲಿ ಎಸಿಪಿ ಎಚ್.ಎಂ .ಮಹದೇವಪ್ಪ, ಇನ್ಸ್‍ಪೆಕ್ಟರ್‍ಗಳಾದ ಸಿ.ರವಿಕುಮಾರ್, ಬಿ.ರಾಜು ಮತ್ತು ಬಾನುಪ್ರಸಾದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin