ಕಾಂಗ್ರೆಸ್ ಮಾಜಿ ಸಚಿವೆ ನಫೀಜ್ ಫಜಲ್ ಸದ್ಯದಲ್ಲೇ ಬಿಜೆಪಿ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

nafees-fazal

ಬೆಂಗಳೂರು,ಮಾ.30- ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕಿ ಹಾಗೂ ಮಾಜಿ ಸಚಿವೆ ನಫೀಜ್ ಫಜಲ್ ಅದೇ ಹಾದಿ ಹಿಡಿದಿದ್ದಾರೆ. ಎರಡು ದಶಕಗಳ ಕಾಂಗ್ರೆಸ್ ಸಂಬಂಧವನ್ನು ಕಳೆದುಕೊಂಡಿರುವ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ಪಕ್ಷ ತೊರೆಯಲು ಕಾರಣ ಏನೆಂಬುದನ್ನು ಪತ್ರದಲ್ಲಿ ವಿವರಿಸಿದ್ದಾರೆ.
ನನಗೆ ಪಕ್ಷದಲ್ಲಿ ಯಾವುದೇ ರೀತಿಯ ಗೌರವಾಧರಗಳು ಸಿಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಅಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ಟಿಕೆಟ್ ಕೇಳಿದಾಗ ನನಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ. ಹೀಗಾಗಿ ಪಕ್ಷ ತೊರೆಯುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಎಸ್ ಎಂ ಕೃಷ್ಣ ಅವರ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.   ಸದ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಮುಖಂಡರು ಪ್ರಚಾರದಲ್ಲಿ ತೊಡಗಿಕೊಂಡಿರುವುದರಿಂದ ಬಳಿಕವಷ್ಟೇ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ಸಿಗಲಿದೆ.

ನಮ್ಮ ಪಕ್ಷಕ್ಕೆ ಹೊಸಬರಾಗಿರುವ ಮುಖ್ಯಮಂತ್ರಿಗಳು ಮುಸ್ಲಿಂ ನಾಯಕರಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದರಿಂದ ನಾನು ಮುಸ್ಲಿಂ ನಾಯಕರಿಂದ ಅವಮಾನಕ್ಕೊಳಗಾದೆ. ಕೇಂದ್ರ ನಾಯಕರಿಗೆ ರಾಜ್ಯದ ಕಾರ್ಯಕರ್ತರು ಹೇಳುವುದನ್ನು ಕೇಳುವುದಕ್ಕೆ ಸಮಯವಿಲ್ಲ ಎಂದು ಸೋನಿಯಾ ಗಾಂಧಿಗೆ ನೀಡಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.   ತಮ್ಮ ಸಾಮಾಜಿಕ ಸೇವೆಯನ್ನು ಗುರುತಿಸಿ ವಿಧಾನ ಪರಿಷತ್‍ಗೆ ನಾಮನಿರ್ದೇಶನ ಮಾಡಬೇಕೆಂದು ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿದಾಗ ಅವಮಾನ ಮಾಡಿದರು ಎಂದು ನಫೀಜ್ ಫಜಲ್ ಬೇಸರ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin