ಕುಡಿಯುವ ನೀರಿಗೆ 200 ಕೋಟಿ ರೂ. ಬಿಡುಗಡೆಗೆ ಮುಂದಾದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Drinking-Water--01

ಬೆಂಗಳೂರು, ಏ .1-ರಾಜ್ಯಾದ್ಯಂತ ಬೇಸಿಗೆಯ ಝಳ ವ್ಯಾಪಕವಾಗುತ್ತಿರುವ ಪರಿಣಾಮವಾಗಿ ಕುಡಿಯುವ ನೀರಿಗೆ 200 ಕೋಟಿ ರೂಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.  ಅಗತ್ಯಕ್ಕನುಸಾರವಾಗಿ ಪ್ರತಿ ಜಿಲ್ಲೆಗೆ ಹತ್ತರಿಂದ ಹದಿನೈದು ಕೋಟಿ ರೂಗಳನ್ನು ಒದಗಿಸಲು ಸರ್ಕಾರ ತೀರ್ಮಾನಿಸಿದ್ದು ಒಂದೆರಡು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಉನ್ನತ ಮೂಲಗಳು ವಿವರ ನೀಡಿವೆ. ಕೇಂದ್ರ ಸರ್ಕಾರ ರೈತರಿಗೆ ಬೆಳೆ ಹಾನಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಿದರೂ ಬರಪರಿಹಾರ ಕಾಮಗಾರಿಗೆ ಯಾವ ನೆರವನ್ನೂ ನೀಡದೆ ಮೌನವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದಲೇ ಹಣ ಬಿಡುಗಡೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ಎರಡು ಕಂತುಗಳಲ್ಲಿ ಒದಗಿಸಿದ ಹಣ ರೈತರಿಗೆ ಪರಿಹಾರ ನೀಡಲು ಬಳಕೆಯಾಗಿದ್ದು ಬರಪರಿಹಾರ ಕಾಮಗಾರಿಗಾಗಿ ಅದು ಹಣ ನೀಡದೆ ಇರುವುದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ಮಧ್ಯೆ ಕೇಂದ್ರ ಪ್ರಾಯೋಜಿತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೂ ಮೋದಿ ಸರ್ಕಾರ ನೆರವು ಕಡಿತಗೊಳಿಸಿರುವುದರಿಂದ ಈ ಬಾಬ್ತಿನಲ್ಲೇ ಸಾವಿರ ಕೋಟಿ ರೂಗಳಿಗೂ ಅಧಿಕ ಹಣವನ್ನು ರಾಜ್ಯ ಸರ್ಕಾರ ನೀಡಿ ಉದ್ಯೋಗ ಸೃಷ್ಟಿ ಮಾಡುತ್ತಿದೆ.  ಉನ್ನತ ಮೂಲಗಳ ಪ್ರಕಾರ,ಕೇಂದ್ರ ಸರ್ಕಾರ ರಾಜ್ಯದಲ್ಲಿ ಆದಾಯ ತೆರಿಗೆ,ಪೆಟ್ರೋಲ್,ಡೀಸೆಲ್ ಮೇಲಿನ ತೆರಿಗೆ ಸೇರಿದಂತೆ ಹಲ ಮೂಲಗಳಿಂದ ಒಂದು ಲಕ್ಷ ಕೋಟಿ ರೂಗಳಿಗೂ ಅಧಿಕ ಹಣವನ್ನು ಪಡೆಯುತ್ತಿದೆಯಾದರೂ ಇದರಲ್ಲಿ ಅರ್ಧದಷ್ಟು ಹಣ ನೀಡಲು ಅದು ತಯಾರಿಲ್ಲ.

ಹೀಗಾಗಿ ರಾಜ್ಯ ಸರ್ಕಾರವೇ ಅನಿವಾರ್ಯವಾಗಿ ಇದೀಗ ಕುಡಿಯುವ ನೀರಿಗೆ ಎಂದು ಪ್ರತಿ ಜಿಲ್ಲೆಗೂ ಹತ್ತರಿಂದ ಹದಿನೈದು ಕೋಟಿ ರೂಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನೆಲ್ಲ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.  ಈ ಮಧ್ಯೆ ಜಾನುವಾರುಗಳಿಗಾಗಿ ಹೊರರಾಜ್ಯಗಳಿಂದ ಮೇವು ಖರೀದಿಸಲು ನಡೆಸುತ್ತಿರುವ ಯತ್ನಕ್ಕೆ ಹಿನ್ನಡೆಯಾಗಿದ್ದು ಹಲ ರಾಜ್ಯಗಳಿಂದ ನಮ್ಮಲ್ಲೇ ಮೇವಿನ ಕೊರತೆ ಇದೆ ಎಂಬ ಉತ್ತರ ಬರುತ್ತಿದೆ.

ಹೀಗಾಗಿ ಪಂಜಾಬ್ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಿಂದ ಮೇವು ತರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಮೂಲಗಳು ವಿವರಿಸಿದ್ದು, ಅಗತ್ಯ ಪ್ರಮಾಣದ ಮೇವು ಕೂಡಾ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin