ನಂಜನಗೂಡು ಕ್ಷೇತ್ರದಲ್ಲಿ ಗೆಲ್ಲಲು ನಡೆಸುತ್ತಿರುವ ಪ್ರಯತ್ನ ಸಾಲದು, ಬಿಜೆಪಿ ನಾಯಕರಿಗೆ ಷಾ ಸಂದೇಶ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah

ಬೆಂಗಳೂರು, ಏ.1- ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಯ ನಡುವೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಪೈಕಿ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ನಡೆಸುತ್ತಿರುವ ಯತ್ನ ಸಾಲದು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.  ಪಕ್ಷದ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ನಿರಂಜನ್ ಅವರ ಪರವಾಗಿ ನಡೆಯುತ್ತಿರುವ ಪ್ರಚಾರ ಸಮರ್ಪಕವಾಗಿದ್ದು, ನಂಜನಗೂಡು ಕ್ಷೇತ್ರವನ್ನು ಗೆಲ್ಲಲು ಈಗ ನಡೆಸುತ್ತಿರುವ ಪ್ರಯತ್ನ ಸಾಲದು ಎಂದು ಅಮಿತ್ ಷಾ ಹೇಳಿದ್ದಾರೆ ಎಂದಿವೆ.

ತಮ್ಮದೇ ಗುಪ್ತಪಡೆ ಹೊಂದಿರುವ ಅಮಿತ್ ಷಾ,ಈ ಪಡೆಯ ಮೂಲಕ ತಮಗೆ ದಕ್ಕಿರುವ ಸಂದೇಶವನ್ನು ಗಮನಿಸಿ,ರಾಜ್ಯ ಬಿಜೆಪಿ ನಾಯಕರಿಗೆ ಈ ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಜಾತಿವಾರು ಮತಗಳನ್ನು ಆಧರಿಸಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ನಮ್ಮದೇ ಎಂದು ಭಾವಿಸಬೇಡಿ. ಕೇವಲ ಜಾತಿಯ ಆಧಾರದ ಮೇಲೆ ಗೆಲುವು ನಿರ್ಧಾರವಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ನೀವು ಎದುರಾಳಿಯ ವಿರುದ್ಧ ನಿಮ್ಮ ಶಕ್ತಿಯನ್ನು ತೋರಿಸುವುದು ಮಾತ್ರವೇ ಗೆಲುವಿಗೆ ಸಾಲುವುದಿಲ್ಲ .ಬದಲಿಗೆ ಎದುರಾಳಿ ಪಾಳೆಯವನ್ನು ಆಂತರಿಕವಾಗಿ ಎಷ್ಟು ದುರ್ಬಲಗೊಳಿಸುತ್ತೀರಿ ಎಂಬುದರ ಆಧಾರದ ಮೇಲೆ ಗೆಲುವು ನಿರ್ಣಯವಾಗುತ್ತದೆ.

ಅದರರ್ಥ,ನಿಮ್ಮ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಿ. ಅದೇ ರೀತಿ ಎದುರಾಳಿ ಕಾಂಗ್ರೆಸ್‍ನ ಶಕ್ತಿ ಕಡಿಮೆ ಮಾಡಿ. ಇಲ್ಲದೇ ಹೋದರೆ ಅವರೇ ಈ ಕೆಲಸ ಮಾಡಿ ನಿಮ್ಮನ್ನು ಅಚ್ಚರಿಗೊಳಪಡಿಸಬಹುದು ಎಂದು ಅಮಿತ್ ಷಾ ಎಚ್ಚರಿಕೆ ನೀಡಿದ್ದಾರೆ.  ತಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನ್ ಅವರ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ.ಆದರೆ ನಂಜನಗೂಡಿನಲ್ಲಿ ಅತಿಯಾದ ಆತ್ಮವಿಶ್ವಾಸದ ಕಾರಣದಿಂದಾಗಿ ಗೆಲುವಿಗೆ ನೀಡಬೇಕಾದ ಗಮನವನ್ನು ನೀವು ಕೊಡುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಎರಡೂ ವಿಧಾನಸಭಾ ಕ್ಷೇತ್ರಗಳ ಗೆಲುವು ಪ್ರತಿಷ್ಟೆಯ ಪ್ರಶ್ನೆ.ಯಾಕೆಂದರೆ ಈ ಎರಡೂ ಕ್ಷೇತ್ರಗಳಲ್ಲಿ ಕಳೆದ ಚುನಾವಣೆ ಸಂದರ್ಭದಲ್ಲಿ ಗೆದ್ದಿದ್ದು ಕಾಂಗ್ರೆಸ್.  ಅದೇ ರೀತಿ,ಇದು ತಮ್ಮ ಹಾಗೂ ಸಿದ್ಧರಾಮಯ್ಯ ಅವರ ನಡುವಣ ಸ್ಪರ್ಧೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅವರೂ ಹೇಳಿದ್ದಾರೆ.ಪಕ್ಷದ ಅಧ್ಯಕ್ಷರೂ ಇದನ್ನು ಹೇಳಿದ್ದಾರೆ.ಹೀಗಾಗಿ ಸಿದ್ಧರಾಮಯ್ಯ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸ್ವಪ್ರತಿಷ್ಟೆಯ ಕಣವನ್ನಾಗಿ ಸ್ವೀಕರಿಸಿದ್ದು ಗೆಲುವಿಗಾಗಿ ಸಕಲ ತಂತ್ರಗಳನ್ನು ಬಳಸುತ್ತಾರೆ.

ಇದನ್ನು ಗಮನದಲ್ಲಿಟ್ಟುಕೊಂಡು ಎದುರಾಳಿಯನ್ನು ಸೋಲಿಸಲು ಈಗ ಅನುಸರಿಸುತ್ತಿರುವ ರಣತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಅವರು ವಿವರಿಸಿದ್ದಾರೆ.  ಅಮಿತ್ ಷಾ ರವಾನೆ ಮಾಡಿರುವ ಈ ಸಂದೇಶ ಇಂದು ರಾಜ್ಯ ಬಿಜೆಪಿಯ ಉನ್ನತ ನಾಯಕರಿಗೆ ತಲುಪಿದ್ದು ಇದರ ಆಧಾರದ ಮೇಲೆ ಅವರು ಹೇಗೆ ರಣತಂತ್ರವನ್ನು ಬದಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin