ಈ ಬಾರಿ ಮುಂಗಾರು ಕೂಡ ಕೈಕೊಡಲಿದೆಯೇ..? ಬರದ ನಾಡಿಗೆ ಮತ್ತೆ ಬರೆ

ಈ ಸುದ್ದಿಯನ್ನು ಶೇರ್ ಮಾಡಿ

Weather--01

ಬೆಂಗಳೂರು,ಏ.3- ಸತತವಾಗಿ ಬರ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯಕ್ಕೆ ಮುಂದಿನ ಮುಂಗಾರು ಕೂಡ ನಿರಾಸಾದಾಯಕವಾಗಿದೆ ಎಂಬ ಅಂಶವನ್ನು ಹವಾಮಾನ ತಜ್ಞರು ಹೊರ ಹಾಕಿದ್ದಾರೆ. ಮುಂದಿನ ನೈರುತ್ಯ ಮುಂಗಾರು ಮಳೆ ಬಗ್ಗೆ ಜನರ ಆತಂಕ ದೂರವಾಗುವಂತಹ ಮಾಹಿತಿ ಇದುವರೆಗೂ ದೊರೆತಿಲ್ಲ. ಹೀಗಾಗಿ ಮುಂಗಾರಿನ ಬಗ್ಗೆ ಆತಂಕದ ಛಾಯೆ ಮುಂದುವರೆದಿದೆ.   ಈ ಬಾರಿ ಮುಂಗಾರು ಪೂರ್ವ ಮಳೆ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ರಾಜ್ಯದಲ್ಲಿ ಬಿದ್ದಿಲ್ಲ. ಕಳೆದ ಒಂದು ತಿಂಗಳಿನಿಂದ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಜೂನ್‍ನಿಂದ ಆರಂಭವಾಗಲಿರುವ ಮುಂಗಾರು ಮಳೆಯ ದೀರ್ಘಕಾಲಿಕ ಹವಾ ಮುನ್ಸೂಚನೆ ಬಗ್ಗೆ ಸಿದ್ದತೆ ನಡೆಯುತ್ತಿದ್ದು , ಏಪ್ರಿಲ್ ಅಂತ್ಯದ ವೇಳೆಗೆ ನಿಖರವಾದ ಅಂದಾಜು ದೊರೆಯುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು.   ಮುಂಗಾರಿನ ಬಗ್ಗೆ ಈಗಾಗಲೆ ಚರ್ಚೆಯಾಗುತ್ತಿದ್ದು , ಮಳೆ ಕೊರತೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂಬ ಅಭಿಪ್ರಾಯ ಹವಾಮಾನ ತಜ್ಞರಿಂದ ಈಗಾಗಲೇ ವ್ಯಕ್ತವಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ದಕ್ಷಿಣ ಭಾರತದಲ್ಲಿ ಮಳೆ ಕೊರತೆ ಕಂಡುಬರುವ ಸಾಧ್ಯತೆಗಳ ಬಗ್ಗೆ ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಸೇರಿದಂತೆ ದೇಶವಿದೇಶಗಳ ವೈಜ್ಞಾನಿಕ ಸಂಸ್ಥೆಗಳು ಮುಂಗಾರಿನ ಬಗ್ಗೆ ದೀರ್ಘಕಾಲಿಕ ಮುನ್ಸೂಚನೆಯನ್ನು ಏಪ್ರಿಲ್ ಕೊನೆ ಹಂತದ ವೇಳೆ ನೀಡಲಿವೆ.   ಕಳೆದ ವರ್ಷ ಕೊಲೊಂಬೊದಲ್ಲಿ ಅಂತಾರಾಷ್ಟ್ರೀಯ ಹವಾಮಾನ ತಜ್ಞರ ಸಮ್ಮೇಳನ ನಡೆದಿದ್ದು , ಅದರಲ್ಲಿ ಮುಂಗಾರು ಮಳೆಯ ಬಗ್ಗೆಯೂ ಕೂಡ ವೈಜ್ಞಾನಿಕ ಸಮಾಲೋಚನೆ ನಡೆದಿತ್ತು. ಆಗ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿತ್ತು.

ಈ ಬಾರಿಯೂ ಕೂಡ ಏಪ್ರಿಲ್ ಅಂತ್ಯದೊಳಗೆ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದ್ದು , ಆಗ ಮುಂಗಾರು ಮಳೆಯ ಅಂದಾಜಿನ ಬಗ್ಗೆ ಸೂಕ್ತ ಮುನ್ಸೂಚನೆ ದೊರೆಯುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin