ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಯುವ ಮತದಾರರೇ ನಿರ್ಣಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

Gundlupete-Niranjan-Geetha
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ಕಣವಾಗಿರುವ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಹಾಗೂ ರಾಜ್ಯ ಸಚಿವರು ಎಡೆಬಿಡದೆ ಪ್ರಚಾರದಲ್ಲಿ ತೊಡಗಿಕೊಂಡಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಈ ಬಾರಿ ಹೊಸದಾಗಿ 20 ಸಾವಿರಕ್ಕೂ ಹೆಚ್ಚು ಯುವ ಮತದಾರರು ಸೇರ್ಪಡೆಯಾಗಿದ್ದು, ಈ ಉಪಚುನಾವಣೆಯಲ್ಲಿ ಇವರೇ ನಿರ್ಣಾಯಕ ಎಂಬುದು ಗಮನಾರ್ಹ. ಈ ಕ್ಷೇತ್ರವು ರಾಜ್ಯ ಭೂಪಟದಲ್ಲಿ ದಕ್ಷಿಣ ಭಾಗದ ತುತ್ತ ತುದಿಯಲ್ಲಿದೆ. ಪಶ್ಚಿಮ ಘಟ್ಟದ ದಟ್ಟ ಅರಣ್ಯದ ಜತೆಗೆ ಬಂಡೀಪುರದ ಅರಣ್ಯ ಪ್ರದೇಶ ಹೊಂದಿರುವ ವಿಶೇಷತೆ ಈ ಕ್ಷೇತ್ರದ್ದು.

ಒಂದೆಡೆ ತಮಿಳುನಾಡು ಮತ್ತೊಂದೆಡೆ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಈ ತಾಲ್ಲೂಕಿನ ಮಂಗಳ ಹೋಬಳಿಗೆ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರವಾಸಿಗರು ಹಾಗೂ ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತದೆ. ಈ ಕ್ಷೇತ್ರದಲ್ಲಿ ಸಹಕಾರ ಸಚಿವರಾಗಿದ್ದ ಹೆಚ್. ಎಸ್. ಮಹದೇವ ಪ್ರಸಾದ್ ಅಜಾತ ಶತ್ರುವಾಗಿ ಸತತವಾಗಿ ಗೆಲ್ಲುತ್ತಾ ಬಂದಿದ್ದರು. ಅವರಿಗಿಂತ ಮೊದಲು ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಕೆ.ಎಸ್.ನಾಗರತ್ನಮ್ಮ ಅವರು ಪಾರುಪತ್ಯ ಮೆರೆದಿದ್ದರು. ರಾಜ್ಯ ವಿಧಾನ ಸಭೆಯ ಮೊಟ್ಟ ಮೊದಲ ಮಹಿಳಾ ವಿಧಾನ ಸಭಾಧ್ಯಕ್ಷೆಯಾಗಿ, ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದರು. ಗುಂಡ್ಲುಪೇಟೆಯವರೇ ಆದ ಅಬ್ದುಲ್ ನಜೀರ್ ಸಾಬ್ ಅವರು ಕೊಳವೆ ಬಾವಿ ಮೂಲಕ ರಾಜ್ಯಾದ್ಯಂತ ಜನರಿಗೆ ನೀರು ನೀಡಿದ ಆಧುನಿಕ ಭಗೀರಥ ಎನಿಸಿದ್ದರು.

ಮತದಾರರೊಡನೆ ತಮ್ಮ ತಾಳ್ಮೆಯ ಮಾತುಕತೆ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಾಗರತ್ನಮ್ಮ ಅವರು ಸರ್ಕಾರದಿಂದ ಮಾಡಿಸಿದ ಕಾರ್ಯಗಳು, ಇಲ್ಲಿನ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಜನಾನುರಾಗಿಯಾಗಿ ಕಳೆದ ಮೂರು ಚುನಾವಣೆಗಳಿಂದಲೂ ದಿವಂಗತ ಹೆಚ್. ಎಸ್. ಮಹದೇವ ಪ್ರಸಾದ್ ಅವರ ವಿರುದ್ಧ ಸೋಲೊಪ್ಪುತ್ತಲೇ ಬಂದ ಭಾರತೀಯ ಜನತಾ ಪಕ್ಷದ ನಿರಂಜನ ಕುಮಾರ್ ಕಾಂಗ್ರೆಸ್‍ನ ಡಾ.ಎಂ.ಸಿ.ಮೋಹನ್ ಕುಮಾರಿ (ಗೀತಾ ಮಹದೇವ ಪ್ರಸಾದ್) ಅವರಿಗೆ ಈ ಬಾರಿಯೂ ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ಪ್ರಕಾರ ಒಟ್ಟು ಮತದಾರರ ಸಂಖ್ಯೆ 2,00,862. ಅದರಲ್ಲಿ 1,00,71 ಮಹಿಳಾ ಮತದಾರರು ಹಾಗೂ 1,00,144 ಪುರುಷ ಮತದಾರರಿದ್ದಾರೆ.

ಕಳೆದ ಚುನಾವಣೆಯಲ್ಲಿ ಹೆಚ್. ಎಸ್. ಮಹದೇವ ಪ್ರಸಾದ್ ಅವರು 73,723 ಮತಗಳನ್ನು ಪಡೆದರೆ ಅಂದು ಕೆಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ನಿರಂಜನ ಕುಮಾರ್ 66,048 ಮತ ಪಡೆದಿದ್ದರು. ದಿವಂಗತ ಮಹದೇವ ಪ್ರಸಾದ್ 2008ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2000 ಮತಗಳ ಅಂತರದಿಂದ ನಿರಂಜನ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, 1994 ರಿಂದ ವಿವಿಧ ಪಕ್ಷಗಳ ಚಿಹ್ನೆಗಳಡಿ ಸ್ಪರ್ಧಿಸಿದ್ದರೂ ಗೆಲುವು ಇವರ ಪಾಲಿಗಿತ್ತು. ಈ ಕ್ಷೇತ್ರವನ್ನು ಏಳು ಬಾರಿ ಕಾಂಗ್ರೆಸ್‍ನ ದಿವಂಗತ ನಾಗರತ್ನಮ್ಮ ಪ್ರತಿನಿಧಿಸಿ ಕಾಂಗ್ರೆಸ್‍ಗೆ ಭದ್ರ ಅಡಿಪಾಯ ಹಾಕಿದ್ದರೂ ನಂತರದ ದಿನಗಳಲ್ಲಿ ಇದೇ ಕ್ಷೇತ್ರದಲ್ಲಿ ಹೆಚ್. ಎಸ್. ಮಹದೇವ ಪ್ರಸಾದ್ ಅವರು ವಿಜಯ ಪತಾಕೆ ಹಾರಿಸಿ ಜನಪ್ರಿಯತೆ ಗಳಿಸಿದ್ದರು.

ಕ್ಷೇತ್ರದಲ್ಲಿ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಲತಃ ಕೆ. ಆರ್. ನಗರ ತಾಲ್ಲೂಕಿನವರಾದ ಲಿಂಗಾಯಿತ ಶೆಟ್ಟರ ಉಪ ಜಾತಿಗೆ ಸೇರಿದ ಹೆಚ್.ಎಸ್.ಮಹದೇವ ಪ್ರಸಾದ್ ಅವರ ಕುಟುಂಬ ತಮ್ಮ ತಂದೆಯ ಕಾಲದಲ್ಲಿಯೇ ಗುಂಡ್ಲುಪೇಟೆ ಕ್ಷೇತ್ರದಲ್ಲಿ ವಾಸಿಸಲು ಆರಂಭಿಸಿದ್ದರು. ದಿವಂಗತ ಮಹದೇವ ಪ್ರಸಾದ್ ಅವರ ಪತ್ನಿ ಡಾ ಎಂ. ಸಿ. ಮೋಹನ್ ಕುಮಾರಿ ಅವರು ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಪತಿಯ ಸಾವಿನ ಸಹಾನುಭೂತಿ, ಕ್ಷೇತ್ರಕ್ಕೆ ಪತಿ ಮಹದೇವ ಪ್ರಸಾದ್ ಅವರು ಸಲ್ಲಿಸಿರುವ ಅಗಾಧ ಸೇವೆ ಇವರ ಗೆಲುವಿನ ನಿರೀಕ್ಷೆಯಾಗಿದೆ.ಭಾರತೀಯ ಜನತಾ ಪಕ್ಷದ ನಿರಂಜನಕುಮಾರ್ ಸ್ಥಳೀಯವಾಸಿ. ಕಳೆದ ಮೂರು ಚುನಾವಣೆಗಳಲ್ಲಿ ಕಡಿಮೆ ಅಂತರದಿಂದ ಸೋಲು ಕಂಡವರು. ಭಾರತೀಯ ಜನತಾ ಪಕ್ಷದ ಕಟ್ಟಾಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ.

ಲಿಂಗಾಯಿತ ಉಪ ಜಾತಿ ಸಾದರ ಪಂಗಡಕ್ಕೆ ಸೇರಿರುವುದರಿಂದ ಆ ಜನಾಂಗದ ಬೆಂಬಲ, ತಮ್ಮ ಹಿಂದಿನ ಸೋಲುಗಳು ತಮಗೆ ಅನುಕಂಪದ ಮತ ದೊರಕಿಸುವ ನಿರೀಕ್ಷೆ ಹಾಗೂ ಸ್ಥಳದಲ್ಲೇ ದೊರೆಯುವ ಅಭ್ಯರ್ಥಿ ಎಂಬ ಆತ್ಮೀಯತೆ ಕ್ಷೇತ್ರದಲ್ಲಿದೆ.ಈ ಕ್ಷೇತದಲ್ಲಿ ಲಿಂಗಾಯತರಷ್ಟೇ ಹೆಚ್ಚಿನ ಮತದಾರರು ಕುರುಬರೂ ಇದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಹೊಸದಾಗಿ ಮತದಾರರಾಗಿರುವ 20,000 ಕ್ಕೂ ಹೆಚ್ಚು ಯುವ ಮತದಾರರ ಮತಗಳೇ ಈಗ ನಿರ್ಣಾಯಕ. ಸಾಮಾಜಿಕ ಜಲ ತಾಣಗಳಲ್ಲಿರುವ ಬಹಳಷ್ಟು ಯುವಕರು ಕೈಗೊಳ್ಳುವ ತೀಮಾನವೇ ಭವಿಷ್ಯದ ಜನಪ್ರತಿನಿಧಿ ಯಾರು ? ಎಂಬುದನ್ನು ನಿರ್ಧರಿಸುತ್ತದೆ.
ಈ ಕ್ಷೇತ್ರದಲ್ಲಿ ಏಳು ಸ್ಪರ್ಧಿಗಳಾದ ಆರ್‍ಪಿಐನಿಂದ ಎಂ.ಶಿವರಾಜು, ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಪಾರ್ಟಿಯ ಎಂ.ಹೊನ್ನೂರಯ್ಯ, ಪಕ್ಷೇತರರಾದ ಬಿ.ಮಹದೇವಪ್ರಸಾದ್, ಎಂ.ಶಿವರಾಮು, ಕೆ.ಸೋಮಶೇಖರ ಅಭ್ಯರ್ಥಿಗಳಾಗಿದ್ದಾರೆ. ಆದರೂ ಅಂತಿಮ ಹಣಾಹಣಿ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ನಡುವೆ ಮಾತ್ರ.

ಈ ಕ್ಷೇತದಲ್ಲಿ ಲಿಂಗಾಯತರಷ್ಟೇ ಹೆಚ್ಚಿನ ಮತದಾರರು ಕುರುಬರೂ ಇದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಹೊಸದಾಗಿ ಮತದಾರರಾಗಿರುವ 20,000 ಕ್ಕೂ ಹೆಚ್ಚು ಯುವ ಮತದಾರರ ಮತಗಳೇ ಈಗ ನಿರ್ಣಾಯಕ. ಸಾಮಾಜಿಕ ಜಲ ತಾಣಗಳಲ್ಲಿರುವ ಬಹಳಷ್ಟು ಯುವಕರು ಕೈಗೊಳ್ಳುವ ತೀಮಾನವೇ ಭವಿಷ್ಯದ ಜನಪ್ರತಿನಿಧಿ ಯಾರು ? ಎಂಬುದನ್ನು ನಿರ್ಧರಿಸುತ್ತದೆ. 

+ ಶಿವಣ್ಣ 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin