ಕೇಂದ್ರಕ್ಕೆ 3 ದಿನಗಳ ಗಡುವು, ಬೇಡಿಕೆ ಈಡೇರದಿದ್ದರೆ ಹೆದ್ದಾರಿ ಬಂದ್, ಪ್ರತಿಭಟನೆಗೆ ಕೈಜೋಡಿಸಿದ ಇಂಧನ ಟ್ಯಾಂಕರ್‍ ಮಾಲೀಕರು

ಈ ಸುದ್ದಿಯನ್ನು ಶೇರ್ ಮಾಡಿ

Lorry-Straike--01

ಬೆಂಗಳೂರು, ಏ.4-ಲಾರಿ ಮಾಲೀಕರು ಕೇಂದ್ರ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ, ವಿಮಾ ಪ್ರೀಮಿಯಮ್ ದರ ಕಡಿತ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡುತ್ತೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಕ್ಷಿಣ ಭಾರತ ರಾಜ್ಯಗಳ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದು, ಏ.8 ರಿಂದ ದೇಶಾದ್ಯಂತ ಲಾರಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ನಾಳೆಯಿಂದ ಪೆಟ್ರೋಲ್, ಡೀಸಲ್ ಟ್ಯಾಂಕರ್‍ಗಳ ಮಾಲೀಕರು ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಕಳೆದ ಐದು ದಿನಗಳಿಂದ ಮುಷ್ಕರ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ಏಳೂವರೆ ಸಾವಿರ ಕೋಟಿ ರೂ. ನಷ್ಟವಾಗಿದೆ. ಹೆದ್ದಾರಿಗಳ ಟೋಲ್ ಸಂಗ್ರಹದಲ್ಲಿ ಶೇ.20 ರಷ್ಟು ಕಡಿಮೆಯಾಗಿದೆ. ಸರಕು-ಸಾಗಾಣಿಕೆಗಳ ವ್ಯತ್ಯಯದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸರ್ಕಾರ ನಮ್ಮ ಕನಿಷ್ಠ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಿದ್ದೇವೆ. ಹೈದರಾಬಾದ್‍ನಲ್ಲಿ ನಡೆದ ಸಭೆಯಲ್ಲಿ ನಮ್ಮ ಸಮಸ್ಯೆಗೆ ಸ್ಪಂದಿಸದ ಕಾರಣ ನಾವು ಪ್ರತಿಭಟನೆ ಮುಂದುವರೆಸಿದ್ದೇವೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin