ಬೆಂಗಳೂರಿಗೆ ಕಾಲಿಡಲಿದೆ ದಿಡ್ಡಳ್ಳಿ ಆದಿವಾಸಿಗಳ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

Diddalli--023

ಬೆಂಗಳೂರು, ಏ.5- ಕೊಡಗು ಜಿಲ್ಲೆಯ ದಿಡ್ಡಳ್ಳಿ ಆದಿವಾಸಿಗಳ ಒಕ್ಕಲೆಬ್ಬಿಸಿರುವ ವಿರೋಧಿ ಹೋರಾಟ ಬೆಂಗಳೂರಿಗೆ ಕಾಲಿಡುತ್ತಿದೆ. ಏ.7ರಂದು ದಿಡ್ಡಳ್ಳಿಯಿಂದ ಜಾಥಾ ಮೂಲಕ ಬೆಂಗಳೂರಿನವರೆಗಿನ ಆಗಮಿಸಿ ಧರಣಿ ನಡೆಸಲು ಮುಂದಾಗಿದ್ದಾರೆ.  ದಿಡ್ಡಳ್ಳಿಯಿಂದ ಸುಮಾರು 244 ಕಿಲೋ ಮೀಟರ್‍ದೂರದ ಜಾಥಾಗೆ ಗುಜರಾತ್‍ನ ಜಿಗ್ನೇಶ್ ಮೆವಾನಿ ಚಾಲನೆ ನೀಡಲಿದ್ದು, ತಮ್ಮ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಆದಿವಾಸಿಗಳು ಹೋರಾಟ ನಡೆಸಲಿದ್ದಾರೆ.

ಆದಿವಾಸಿಗಳ 570 ಕುಟುಂಬಗಳಿಂದ ಪ್ರತಿವಾರ ತಲಾ ಒಂದು ಕುಟುಂಬದಿಂದ 100ರೂ.ನಂತೆ ಹಲವಾರು ದಿನಗಳ ಕಾಲ ಒಟ್ಟು 6,84,000ರೂ. ಲಂಚ ಸಂಗ್ರಹಿಸಿದ್ದ ಅರಣ್ಯಾಧಿಕಾರಿ ಹಾಗೂ ಎಸಿಎಫ್ ಫಾರೆಸ್ಟ್ ರೇಂಜರ್‍ಗಳು ಅವರು ಅಲ್ಲೇ ವಾಸಿಸಲು ಅನುವು ಮಾಡಿಕೊಟ್ಟಿದ್ದರು. ನವೆಂಬರ್ ನಂತರ ಕೆಲಸವಿಲ್ಲದೆ ಆದಿವಾಸಿಗಳು ಹಣ ನೀಡಲು ಆಗದೆ ಹೋದಾಗ ಡಿ.7ರಂದು ಏಕಾಏಕಿ ನುಗ್ಗಿ ಅವರ ಗುಡಿಸಲುಗಳನ್ನು ನಾಶ ಮಾಡಿದ್ದೇ ಅಲ್ಲದೆ ಅನ್ನಾಹಾರಗಳನ್ನು ಧ್ವಂಸ ಮಾಡಿದ್ದಾರೆ ಎಂದು ಸಮಿತಿ ಮುಖಂಡ ನಿರ್ವಾಣಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಲ್ಲಿಂದ ಬರುವ ಜಾಥಾ ಏ.14ರಂದು ಅಂಬೇಡ್ಕರ್ ಜನ್ಮ ದಿನೋತ್ಸವದ ದಿನ ಬನ್ನಪ್ಪ ಪಾರ್ಕ್‍ನಲ್ಲಿ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಿದ್ದೇವೆ. ನಂತರ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದೇವೆ ಎಂದು ವಿವರಿಸಿದರು.
ರಾಜ್ಯದ ನಾನಾ ಭಾಗಗಳಿಂದ ರ್ಯಾಲಿ ಮೂಲಕ ಆಗಮಿಸುವ ಆದಿವಾಸಿಗಳು ಧರಣಿಗೆ ಬೆಂಬಲ ನೀಡಲಿದ್ದಾರೆ ಎಂದರು.   ದಿಡ್ಡಳ್ಳಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ ನಂತರ ಈ ಪ್ರದೇಶಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭೇಟಿ ನೀಡಿ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಮೂರು ಜಾಗಗಳನ್ನು ಗುರುತಿಸಿ ಅವರ ವಾಸ್ತವ್ಯಕ್ಕೆ ಸೂಚಿಸಲಾಗಿತ್ತು. ಆದರೆ, ಈ ಆದಿವಾಸಿಗಳು ದಿಡ್ಡಳ್ಳಿಯಲ್ಲೇ ಸ್ಥಳ ನೀಡುವಂತೆ ಒತ್ತಾಯಿಸಿದ್ದಾರೆ.

ಶ್ರೀಮಂತರು 100 ರಿಂದ 200 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಬದುಕುತ್ತಿದ್ದಾರೆ. ಆದರೆ, ಕೂಲಿ-ನಾಲಿ ಮಾಡಿಕೊಂಡು ಬದುಕುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ನಿವಾಸಿಗಳಾದ ಶರೀಫ, ಹೂವೆಣ್ಣೆ, ಅನಿತಾ, ರಾಯಲಪ್ಪ ತಮ್ಮ ಅಳಲು ತೋಡಿಕೊಂಡರು.
ತಮಗೆ ದಿಡ್ಡಳ್ಳಿಯಲ್ಲೇ ವಾಸಿಸಲು ಅನುವು ಮಾಡಿಕೊಡಬೇಕು. ಸಾಲ ಮನ್ನಾ ಮಾಡಬೇಕು. ಭೂಮಿ ಹಕ್ಕು ಹಾಗೂ ಕನಿಷ್ಠ ಕೂಲಿ ಸೇರಿದಂತೆ 10 ಬೇಡಿಕೆಗಳನ್ನಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ನಡೆಯಲಿದೆ.  ಹಿರಿಯ ಸ್ವತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಸಿರಿಮನೆ ನಾಗರಾಜ್, ಭಾಸ್ಕರ್, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin