ಮಾಧ್ಯಮವನ್ನು ನಿಯಂತ್ರಿಸಲು ಶಾಸನ ಸಮಿತಿ ರಚಿಸಿರುವುದನ್ನು ವಿರೋಧಿಸಿ ವಾಟಾಳ್ ಏಕಾಂಗಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagataj-Protest

ಬೆಂಗಳೂರು, ಏ.5- ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವನ್ನು ನಿಯಂತ್ರಿಸಲು ವಿಧಾನಮಂಡಲದಲ್ಲಿ ಶಾಸನ ಸಮಿತಿಯನ್ನು ರಚನೆ ಮಾಡಿರುವುದನ್ನು ವಿರೋಧಿಸಿ ವಿಧಾನಸೌಧದ ಮುಂದೆ ಕಪ್ಪು ಪಟ್ಟಿ ಧರಿಸಿ ಏಕಾಂಗಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.  ಮಾಧ್ಯಮವನ್ನು ನಿಯಂತ್ರಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಣಕವಾಗಿದೆ. ಸರ್ವಾಧಿಕಾರಿ ಧೋರಣೆಯಾಗಿದೆ. ಕೂಡಲೇ ವಿಧಾನಸಭೆ ಅಧ್ಯಕ್ಷರು ರಚಿಸಿರುವ ಸಮಿತಿಯನ್ನು ವಜಾ ಮಾಡಿ ಶಾಸನ ಸಭೆಯ ಗೌರವವನ್ನು ಉಳಿಸಬೇಕೆಂದು ವಾಟಾಳ್ ಈ ಸಂದರ್ಭದಲ್ಲಿ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುವಂತೆ ಮಾಧ್ಯಮಕ್ಕೆ ಅವಕಾಶ ಮಾಡಿಕೊಡಬೇಕು.

ಆದರೆ, ಮೂಗುದಾರ ಹಾಕುವ ಕೆಲಸಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಈ ರೀತಿಯ ಕೆಲಸವಾಗಿಲ್ಲ. ಮಾಧ್ಯಮಗಳಲ್ಲಿ ತಪ್ಪುಗಳಾದರೆ ಅವುಗಳನ್ನು ಸರಿಪಡಿಸಲು ಅದರದ್ದೇ ಆದ ಮಾರ್ಗವಿದೆ. ಆದರೆ, ಶಾಸನ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯ ಕೈಗೊಂಡು ಸಮಿತಿ ರಚನೆ ಮಾಡುವಂತಹ ಔಚಿತ್ಯವೇನಿದೆ ಎಂದು ವಾಟಾಳ್ ಪ್ರಶ್ನಿಸಿದ್ದಾರೆ.  ಸಾಕಷ್ಟು ಮಾಧ್ಯಮಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಪ್ರತಿಪಕ್ಷಗಳ ಸ್ಥಾನದಲ್ಲಿ ನಿಂತು ಸರ್ಕಾರಗಳಿಗೆ ಚಾಟಿ ಬೀಸುವ ಕೆಲಸವನ್ನು ಮಾಧ್ಯಮಗಳು ಪರಿಣಾಮಕಾರಿಯಾಗಿ ಮಾಡುತ್ತಿರುವುದರಲ್ಲಿ ಅನುಮಾನವಿಲ್ಲ.

ಎಲ್ಲೋ ಕೆಲವೆಡೆ ಆಗಿರುವ ಲೋಪಗಳಿಗೆ ಎಲ್ಲವನ್ನೂ ನಿಯಂತ್ರಿಸಬೇಕೆಂಬ ಹುಂಬು ನಿರ್ಧಾರ ಕೈಗೊಳ್ಳುವುದು ಸಲ್ಲದು, ಕೂಡಲೇ ಸಭಾಧ್ಯಕ್ಷರು ತಾವು ರಚಿಸಿರುವ ಸಮಿತಿಯನ್ನು ವಾಪಸ್ ಪಡೆಯಬೇಕು. ಸಮಿತಿಯ ಅಧ್ಯಕ್ಷರಾಗಲು ಸೂಚಿಸಿದವರೇ ನಕಾರ ವ್ಯಕ್ತಪಡಿಸಿದ್ದಾರೆ. ಅಲ್ಲಿಗೆ ಈ ಸಮಿತಿಗೆ ಮಾನ್ಯತೆ ಸಿಗುವುದಿಲ್ಲ.  ಮಾಧ್ಯಮಗಳಿಲ್ಲದಿದ್ದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳಿಗೆ ಕಡಿವಾಣವೇ ಇರುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಮಾಧ್ಯಮಗಳ ಮೇಲೆ ಸವಾರಿ ಮಾಡುವ ಕೆಲಸವನ್ನು ಕೈಬಿಡಬೇಕೆಂದು ವಾಟಾಳ್ ಈ ಸಂದರ್ಭದಲ್ಲಿ ಹೇಳಿದರು.  ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳನ್ನು ಬಿಂಬಿಸುವುದನ್ನು ಮಾಧ್ಯಮಗಳು ಪರಿಣಾಮಕಾರಿಯಾಗಿ ಮಾಡುತ್ತಿರುವುದರಿಂದ ಪ್ರಜಾಪ್ರಭುತ್ವ ಮೌಲ್ಯಯುತವಾಗಿದೆ. ಇದಕ್ಕೆ ಕಡಿವಾಣ ಹಾಕುವುದು ಬೇಡ ಎಂದು ವಾಟಾಳ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin