ಮಾನವೀಯತೆ ಮರೆತ ಮುಷ್ಕರ ನಿರತ ಲಾರಿ ಮಾಲೀಕರಿಗೆ ಸಾರ್ವಜನಿಕರಿಂದ ಹಿಡಿಶಾಪ

ಈ ಸುದ್ದಿಯನ್ನು ಶೇರ್ ಮಾಡಿ

Lorry---01

ಬೆಂಗಳೂರು, ಏ.5- ಲಾರಿ ಮಾಲೀಕರು ಮಾನವೀಯತೆ ಕಳೆದುಕೊಂಡಂತಾಗಿದ್ದಾರೆ. ತಮ್ಮ ಕನಿಷ್ಠ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಒಂದು ವಾರದಿಂದ ನಡೆಸುತ್ತಿರುವ ಪ್ರತಿಭಟನೆ ಜನಸಾಮಾನ್ಯರ ಮೇಲೆ ಎಷ್ಟರ ಮಟ್ಟಿಗೆ ಬೀರುತ್ತದೆ ಎಂಬ ಕನಿಷ್ಠ ಯೋಚನೆ ಅವರಿಗೆ ಬರುತ್ತಿಲ್ಲವೆ ? ಸರ್ಕಾರ ಕೂಡ ಅವರ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲವೇ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಲಾರಿ ಮುಷ್ಕರದಿಂದ ದಿನನಿತ್ಯದ ವಸ್ತುಗಳ ಬೆಲೆ ಏರುತ್ತಿದೆ. ಆತಂಕದಲ್ಲಿ ಪೆಟ್ರೋಲ್ ಬಂಕುಗಳ ಮುಂದೆ ಜನ ಕ್ಯೂನಿಲ್ಲುತ್ತಿದ್ದಾರೆ. ಅಷ್ಟೋ ಇಷ್ಟೋ ಬೆಳೆದ ಹಣ್ಣು, ತರಕಾರಿ, ಸೊಪ್ಪು, ಕಾಳು, ಬೇಳೆಗಳನ್ನು ಮಾರುಕಟ್ಟೆಗೆ ತರಲಾಗದೆ ರೈತರು ವಿಲವಿಲನೆ ಒದ್ದಾಡುತ್ತಿದ್ದಾರೆ.

ಬರಗಾಲದಲ್ಲಿ ಲಾರಿ ಮುಷ್ಕರದಿಂದ ರೈತರು ಹಾಗೂ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಾಲಾ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳು, ಶೂ ಇನ್ನಿತರೆ ವಸ್ತುಗಳನ್ನು ಸರಬರಾಜು ಮಾಡಬೇಕಾಗಿದೆ. ಲಾರಿ ಮುಷ್ಕರದಿಂದ ಇದಕ್ಕೆಲ್ಲಾ ಅಡಚಣೆಯಾಗಿದೆ. ಶೈಕ್ಷಣಿಕವಾಗಿಯೂ ಪ್ರತಿಕೂಲ ಪರಿಣಾಮ ಬೀರಿದೆ.  ಸಾವಿರಾರು ಟನ್‍ಗಟ್ಟಲೆ ಟೊಮ್ಯಾಟೋ. ಆಲುಗಡ್ಡೆ ಇನ್ನಿತರೆ ತರಕಾರಿಗಳು ಕೊಳೆಯಲಾರಂಭಿಸಿವೆ. ಲಾರಿ ಮಾಲೀಕರಿಗೆ ಸಡ್ಡು ಹೊಡೆದಿರುವ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದೆ.

ಲಾರಿ ಮಾಲೀಕರ ಬಹುತೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕಾದರೂ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ದಿನನಿತ್ಯದ ಹಣ್ಣು, ತರಕಾರಿ, ಹಾಲು, ಔಷಧಿಗಳನ್ನು ಪೂರೈಕೆ ಮಾಡಲು ರಸ್ತೆ ಸಾರಿಗೆ ಬಸ್‍ಗಳನ್ನು ಬಳಸಲು ಸರ್ಕಾರ ಮುಂದಾಗಿದೆ.
ಇಂದು ನೂರಾರು ಬಸ್‍ಗಳಲ್ಲಿ ಸಾವಿರಾರು ಟನ್‍ಗಳಷ್ಟು ಆಲೂಗಡ್ಡೆ, ಟೊಮ್ಯಾಟೋವನ್ನು ಮಾರುಕಟ್ಟೆಗೆ ತರಲಾಗಿದೆ. ಪ್ರತೀ ಬಾರಿ ಲಾರಿ ಮುಷ್ಕರ ಮಾಡುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ನಷ್ಟು ಉಂಟಾಗುತ್ತದೆ. ಈಗಾಗಲೇ ಸಹಸ್ರಾರು ಕೋಟಿ ನಷ್ಟ ಉಂಟಾಗಿದೆ. ಸಣ್ಣ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು ಸೇರಿದಂತೆ ರೈತರಿಗೆ ಅಪಾರ ನಷ್ಟವಾಗಿದೆ.

ಇನ್ಸುರೆನ್ಸ್ ಪ್ರೀಮಿಯಂ ದರ ಹೆಚ್ಚಳ, ಟೋಲ್ ಹೆಚ್ಚಳ, ರಾಜ್ಯ ರಸ್ತೆಗಳಿಗೆ ತೆರಿಗೆ ವಿಧಿಸಿದರೂ ಅವೆಲ್ಲವನ್ನೂ ಲಾರೀ ಮಾಲೀಕರು ಗ್ರಾಹಕರ ತಲೆಯ ಮೇಲೆ ಹಾಕುತ್ತಾರೆ. ಯಾವುದನ್ನೂ ಏನೂ ಅವರು ಕೈಯಿಂದ ಕಟ್ಟುವುದಿಲ್ಲ. ಆದರೂ ಈ ರೀತಿ ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ಪದೇ ಪದೇ ತೊಂದರೆ ಕೊಡುತ್ತಲೇ ಇರುತ್ತಾರೆ ಎಂದು ವಿವಿಧ ರೈತ ಸಂಘಟನೆಗಳು ಹಾಗೂ ನಾಗರಿಕರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.  ಹೆದ್ದಾರಿ ಬಂದ್ ಮಾಡುತ್ತೇವೆ. ವಿಧಾನಸೌಧದ ಮುಂದೆ ಲಾರಿಗಳನ್ನು ತಂದು ನಿಲ್ಲಿಸುತ್ತೇವೆ. ಯಾವ ರೀತಿ ಸರಕು ಸಾಗಾಣಿಕೆ ಮಾಡುತ್ತಾರೋ ನೋಡಿಯೇ ಬಿಡೋಣ ಎಂದು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸರ್ಕಾರಗಳಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದಾರೆ.

ಬೇಡಿಕೆಗಳ ಈಡೇರಿಕೆಗೆ ಸಾಂಕೇತಿಕ ಧರಣಿ ಮಾಡಬಹುದು. ಆದರೆ, ಮುಷ್ಕರವನ್ನೇ ವೃತ್ತಿಯನ್ನಾಗಿಸಿಕೊಂಡರೆ ನಮ್ಮ ಪಾಡೇನು? ಇದರ ಮೇಲೆ ಅವಲಂಬಿತರಾದ ಚಾಲಕರು, ಕ್ಲೀನರ್, ದಿನಗೂಲಿ ಕಾರ್ಮಿಕರ ಗತಿ ಏನು. ಇವರ ಬಗ್ಗೆ ಯೋಚಿಸುವ ವ್ಯವಧಾನ ಲಾರಿ ಮಾಲೀಕರಿಗೆ ಇಲ್ಲವೇ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.  ಪ್ರತಿಭಟನೆ ಮಾಡುವವರು ಪ್ರತಿಭಟನೆಯಿಂದ ಜನಸಾಮಾನ್ಯರಿಗಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಕೂಡ ಚಿಂತನೆ ನಡೆಸಬೇಕು. ತಮ್ಮ ಬೇಡಿಕೆಗಳು ಕೂಡ ನ್ಯಾಯಸಮತ್ತವಾದರೂ ಜನಸಾಮಾನ್ಯರ ಸ್ಥಿತಿ-ಗತಿಗಳ ಬಗ್ಗೆಯೂ ಕೂಡ ಯೋಚಿಸಬೇಕಾದ ಅಗತ್ಯವಿದೆ.
ತರಕಾರಿ ಮಾರುವವರು, ಕೊಳ್ಳುವವರು, ವರ್ತಕರು, ದಲ್ಲಾಳಿಗಳು, ಜೆಲ್ಲಿಕಲ್ಲು ಒಡೆಯುವವರು, ಮರಳು ಮಾರಾಟ, ಸಾಗಾಟ ಮಾಡುವವರು, ನಿರ್ಮಾಣ ವಲಯದ ಕಾರ್ಮಿಕರು, ಕಬ್ಬಿಣ, ಸಿಮೆಂಟ್ ಸಾಗಾಟ, ಮುದ್ರಣ ವಲಯ ಹೀಗೆ ಸಾಕಷ್ಟು ಕ್ಷೇತ್ರಗಳು ಲಾರಿ ಮುಷ್ಕರಿದಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪದೇ ಪದೇ ಲಾರಿ ಮುಷ್ಕರ ನಡೆಸಿದರೆ ಸಾರ್ವಜನಿಕರೇ ತಿರುಗಿ ಬೀಳುವುದರಲ್ಲಿ ಆಶ್ಚರ್ಯವಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin