ಮೌಲ್ಯಮಾಪನಕ್ಕೆ 90ರಷ್ಟು ಉಪನ್ಯಾಸಕರು ಹಾಜರ್, ಮೇ 2ನೇ ವಾರದಲ್ಲಿ ಪಿಯು ರಿಸಲ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Evaluation--01

ಬೆಂಗಳೂರು, ಏ.7- ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಶೇ.90ರಷ್ಟು ಉಪನ್ಯಾಸಕರು ಹಾಜರಾಗಿದ್ದು, ಸುಸೂತ್ರವಾಗಿ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ತಿಳಿಸಿದರು.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮೌಲ್ಯಮಾಪನ ಆರಂಭವಾದ ಮೊದಲ ದಿನ 4 ಸಾವಿರ ಮಂದಿ ಉಪನ್ಯಾಸಕರು ಗೈರು ಹಾಜರಾಗಿದ್ದರು. ಗೈರು ಹಾಜರಾದವರಿಗೆ ಕಾನೂನು ರೀತಿ ಶಿಸ್ತು ಕ್ರಮಕೈಗೊಳ್ಳಲಾಗುವುದು. ನಿನ್ನೆ ಶೇ.88ರಷ್ಟು ಮೌಲ್ಯಮಾಪಕರು ಹಾಜರಾಗಿದ್ದರು. 21 ಸಾವಿರ ಮೌಲ್ಯಮಾಪಕರ ಪೈಕಿ 17,761 ಉಪನ್ಯಾಸಕರು ಹಾಜರಾಗಿದ್ದರು.

ನಿಗದಿತ ಅವಧಿಯೊಳಗೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ಮೇ 10ಕ್ಕೆ ಫಲಿತಾಂಶ:

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಏ.20ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಮೇ 10 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ. ಮೌಲ್ಯಮಾಪನ ಮುಗಿದರೂ ಫಲಿತಾಂಶವನ್ನು ಸಿಇಟಿ ಮತ್ತು ನೀಟ್ ಪರೀಕ್ಷೆ ಮುಗಿಯುವವರೆಗೂ ಪ್ರಕಟಿಸದಿರಲು ಪದವಿಪೂರ್ವ ಪರೀಕ್ಷಾ ಮಂಡಳಿ ನಿರ್ಧರಿಸಿದೆ.

ಫಲಿತಾಂಶವನ್ನು ಸಿಇಟಿ ಮತ್ತು ನೀಟ್ ಪರೀಕ್ಷೆಗೆ ಮುನ್ನವೇ ಪ್ರಕಟಿಸಿದರೆ ಕಡಿಮೆ ಅಂಕ ಗಳಿಸಿದ, ಇಲ್ಲವೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮುಂದೂಡುವ ನಿರ್ಧಾರ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಎಂಜಿನಿಯರಿಂಗ್ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಮೇ 2 ಮತ್ತು 3 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಮೇ 7 ರಂದು ಮೆಡಿಕಲ್ ಮತ್ತು ಡೆಂಟಲ್‍ಗೆ ಸಂಬಂಧಿಸಿದ ನೀಟ್ ಪರೀಕ್ಷೆ ನಡೆಯಲಿದ್ದು, ಆ ನಂತರವಷ್ಟೇ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin