ಅಂಗನವಾಡಿ ಕಾರ್ಯಕರ್ತೆಯ ಬೇಡಿಕೆಗಳ ಕುರಿತು ನಾಳೆ ಮಹತ್ವದ ಸಭೆ, ಬಿಕ್ಕಟ್ಟು ಬಗೆಹರಿಯುವುದೇ..?

ಈ ಸುದ್ದಿಯನ್ನು ಶೇರ್ ಮಾಡಿ

Anganavadi-2

ಬೆಂಗಳೂರು, ಏ.9– ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆಗೆ ಸಂಬಂಧಿಸಿದಂತೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದು, ಬಿಕ್ಕಟ್ಟು ಬಗೆಹರಿದು ಪರಿಹಾರ ದೊರೆಯಲಿದೆಯೇ ಎಂಬ ತೀವ್ರ ಕುತೂಹಲ ಕೆರಳಿಸಿದೆ.  ನಾಳಿನ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಬಗ್ಗೆ ಸೂಕ್ತ ತೀರ್ಮಾನ ಆಗದಿದ್ದರೆ ಮತ್ತೆ ಪ್ರತಿಭಟನೆಯ ಹಾದಿ ಹಿಡಿಯುವ ಸಾಧ್ಯತೆಗಳಿದ್ದು, ನಾಳಿನ ಸಭೆ ಪ್ರತಿಭಟನೆಗೆ ಮತ್ತೆ ಹಾದಿ ಮಾಡಿಕೊಡುವುದೋ ಅಥವಾ ತೆರೆ ಎಳೆಯವುದೋ ಎಂಬುದು ಕಾದು ನೋಡಬೇಕಿದೆ.

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ನಡೆಸಿ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.  ಈ ಹಿನ್ನೆಲೆಯಲ್ಲಿ ಬೇಡಿಕೆ ಈಡೇರಿಕೆ ಸಂಬಂಧ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದರು.

ಅದರಂತೆ ನಾಳೆ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲಿದ್ದಾರೆ.  ಈ ಸಭೆ ಫಲಪ್ರದವಾದರೆ ಬಿಕ್ಕಟ್ಟು ಬಗೆಹರಿಯಲಿದೆ. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ಹಾದಿಯನ್ನು ಅಂಗನವಾಡಿ ನೌಕರರು ಹಿಡಿಯಲಿದ್ದಾರೆ. ಬಜೆಟ್‍ನಲ್ಲಿ ಘೋಷಿಸಿದಂತೆ ಏ.1ರಿಂದ ಗೌರವಧನ ಹೆಚ್ಚಳವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಒಟ್ಟು 7ಸಾವಿರ ದೊರೆಯುತ್ತಿದೆ. ಇದನ್ನು 10 ಸಾವಿರ ರೂ.ಗೆ ಹೆಚ್ಚಳ ಮಾಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರ ವಿಧಾನಮಂಡಲದ ಅಧಿವೇಶನದಲ್ಲೂ ಪ್ರತಿಧ್ವನಿಸಿ ಗೌರವಧನ ಹೆಚ್ಚಳ ಮಾಡುವಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಒತ್ತಾಯಿಸಿದ್ದವು. ಅಹೋರಾತ್ರಿ ಧರಣಿ ನಡೆಸಿದ ಕಾರ್ಯಕರ್ತೆಯರೂ ಕೂಡ ಬೇಡಿಕೆ ಈಡೇರುವವರೆಗೂ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಮುಖ್ಯಮಂತ್ರಿಯವರು ಮನವೊಲಿಸಿ ಬೇಡಿಕೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿ ಸಭೆಯ ದಿನಾಂಕವನ್ನು ನಿಗದಿ ಪಡಿಸಿದ್ದರು.  ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೇಡಿಕೆ ಈಡೇರದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರತಿಭಟನೆ ಕೈಗೊಳ್ಳುವುದಾಗಿ ಸಂಘಟನೆಯ ಮುಖ್ಯಸ್ಥೆ ವರಲಕ್ಷ್ಮಿ ಈಗಾಗಲೇ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin