‘ಫಲ’ ಕೊಟ್ಟ ಸಭೆ : ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Anganavaadi--01

ಬೆಂಗಳೂರು, ಏ.10– ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ 1000 ರೂ. ಹಾಗೂ ಸಹಾಯಕಿಯರಿಗೆ 500ರೂ.ನಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.  ಗೌರವಧನ ಹೆಚ್ಚಳದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳು ಮತ್ತು ಕಾರ್ಮಿಕ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮತ್ತಿತರರು ನಡೆಸಿದ ಸಭೆ ಸಫಲವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಗೌರವ ಧನ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು.

ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಬಜೆಟ್‍ನಲ್ಲಿ 1000ರೂ., ಸಹಾಯಕಿಯರಿಗೆ 500ರೂ. ಹೆಚ್ಚಳ ಮಾಡಲಾಗಿದ್ದು, ಈಗ ಮತ್ತೆ 1000 ಹಾಗೂ 500ರೂ.ಗಳನ್ನು ಹೆಚ್ಚಳ ಮಾಡಲಾಗಿದೆ. ಇದರಿಂದಾಗುವ ಆರ್ಥಿಕ ಹೊರೆಯನ್ನು ಇನ್ನೂ ಅಂದಾಜು ಮಾಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಸರ್ಕಾರವಿದ್ದು, ಅವರ ಇನ್ನಿತರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸುವುದಾಗಿ ತಿಳಿಸಿದರು. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರು 6000 ವೇತನ ಪಡೆಯುತ್ತಿದ್ದು, ಈಗ 8000ರೂ. ವೇತನ ಪಡೆಯಲಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಟ್ಟು 4400ರೂ. ಗೌರವಧನವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದ 1,35,157 ಮಂದಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇದರಿಂದ ಅನುಕೂಲವಾಗುತ್ತದೆ. ಇದಲ್ಲದೆ ಮಿನಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ಕೂಡ 500ರೂ. ಹೆಚ್ಚಳ ಮಾಡಿರುವುದಾಗಿ ಸಿದ್ದು ತಿಳಿಸಿದರು.  ಅಂಗನವಾಡಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಶೇ.90ರಷ್ಟು ಅನುದಾನ ನೀಡುತ್ತಿತ್ತು ಈಗ ಅನುದಾನವನ್ನು ಶೇ.50ರಷ್ಟು ಕಡಿಮೆ ಮಾಡಿದೆ. ಆದರೂ ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಳ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೇವಲ 500 ಮತ್ತು 250ರೂ.ಗಳಷ್ಟು ಹೆಚ್ಚಳ ಮಾಡಿತ್ತು ಎಂದು ಹೇಳಿದರು.

ಶಿಶು ಪಾಲನೆ ಹಾಗೂ ಇನ್ನಿತರ ಸಾಮಾಜಿಕ ಜವಾಬ್ದಾರಿಗಳ ಕೆಲಸವನ್ನು ನಿರ್ವಹಿಸುವ ಅಂಗನವಾಡಿಯವರ ಪರವಾಗಿ ನಮ್ಮ ಸರ್ಕಾರವಿದೆ. ಪದೇ ಪದೇ ಬೇಡಿಕೆಗಳನ್ನು ಸಲ್ಲಿಸಬಾರದು. ಅವರ ಇನ್ನಿತರ ಬೇಡಿಕೆಗಳನ್ನೂ ಕೂಡ ಹಂತ ಹಂತವಾಗಿ ಪರಿಹರಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ಸಚಿವೆ ಉಮಾಶ್ರೀ ಮಾತನಾಡಿ, ನಮ್ಮ ಆಡಳಿತಾವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಹೆಚ್ಚಿನ ವೇತನ ನೀಡಿದ್ದೇವೆ. ಅವರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿ ಸರ್ಕಾರ ಮತ್ತೆ ವೇತನ ಹೆಚ್ಚಳ ಮಾಡಿದೆ. ಅವರ ಪರವಾಗಿ ಯಾವಾಗಲೂ ನಾವಿದ್ದೇವೆ ಎಂದು ತಿಳಿಸಿದರು.
ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, 4 ಸಾವಿರ ವೇತನ ಹೆಚ್ಚಳಕ್ಕೆ ಮನವಿ ಮಾಡಿದ್ದೆವು. ರಾಜ್ಯ ಸರ್ಕಾರ ಶೇ.50ರಷ್ಟು ನಮ್ಮ ಬೇಡಿಕೆಯನ್ನು ಈಡೇರಿಸಿದೆ. ನಾವು ಅಭಿನಂದನೆ ಸಲ್ಲಿಸುತ್ತೇವೆ. ಅಂಗನವಾಡಿ ಕೇಂದ್ರಗಳನ್ನು ಎಲ್‍ಕೆಜಿ, ಯುಕೆಜಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕೆಂದು ಮನವಿ, ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಅವುಗಳ ಈಡೇರಿಕೆಗೂ ಕೂಡ ಆಗ್ರಹಿಸುತ್ತೇವೆ. ನಮ್ಮ ಹೋರಾಟಕ್ಕೆ ಶೇ.50ರಷ್ಟು ಜಯ ಸಿಕ್ಕಿದೆ ಎಂದರು.

ಕೇಂದ್ರ ಸರ್ಕಾರ ಸಾರ್ವಜನಿಕ ವಲಯಗಳ ಅನುದಾನವನ್ನು ಹಿಂಪಡೆಯಲಿ. ಆದರೆ, ಇಂತಹ ಸೇವಾ ವಲಯದ ಅನುದಾನವನ್ನು ಕಡಿತಗೊಳಿಸುವ ಕ್ರಮ ಸರಿಯಲ್ಲ. ಮುಂದಿನ ದಿನಗಳಲ್ಲಿ ಸಂಸದರ ಮನೆ ಮುಂದೆಯೂ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.   ಕಾರ್ಮಿಕ ಮುಖಂಡರಾದ ಮಾರುತಿ ಮಾನ್ಪಡೆ, ಯಮುನಾ ಗಾಂವ್ಕರ್, ವಿ.ಜೆ.ಕೆ.ನಾಯರ್, ಶ್ರೀರಾಮರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin