ಉಪಚುನಾವಣೆ ಫಲಿತಾಂಶದ ನಂತರ ಸಂಪುಟ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

siddu

ಬೆಂಗಳೂರು, ಏ.11- ನಂಜನಗೂಡು- ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಳೇ ಮೈಸೂರು ಭಾಗದ ಒಬ್ಬರು ಹಾಗೂ ಉತ್ತರಕರ್ನಾಟಕ ಭಾಗದ ಒಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ.ಮುಂಬರುವ 2018ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾದ ನಿಟ್ಟಿನಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ ಹಾಕಿರುವ ಸಿದ್ದರಾಮಯ್ಯ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಲಿಂಗಾಯತ ಮುಖಂಡರನ್ನು ತನ್ನತ್ತ ಸೆಳೆಯಲು ಈ ಭಾಗದವರೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲು ನಿರ್ಧರಿಸಿದ್ದಾರೆ.ಹಳೇ ಮೈಸೂರು ಭಾಗದ 9 ಜಿಲ್ಲೆಗಳಲ್ಲಿ ಹೆಚ್ಚಾಗಿ ಲಿಂಗಾಯತ ಶಾಸಕರಿಲ್ಲ. ಉಪಚುನಾವಣೆಯಲ್ಲಿ ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದಿವಂಗತ ಮಹದೇವಪ್ರಸಾದ್ ಅವರ ಪತ್ನಿ ಗೀತಾಮಹದೇವಪ್ರಸಾದ್ ಗೆಲುವು ಸಾಧಿಸಿದರೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಇರಾದೆ ಮುಖ್ಯಮಂತ್ರಿಗಳದ್ದಾಗಿದೆ.

ಹಳೇ ಮೈಸೂರು ಭಾಗದಲ್ಲಿ ಪ್ರಬಲ ಲಿಂಗಾಯತರ ನಾಯಕರಾಗಿ ಮಹದೇವ ಪ್ರಸಾದ್ ಹೊರಹೊಮ್ಮಿದ್ದರು. ಅವರೊಂದಿಗೆ ಗೀತಾ ಪ್ರಸಾದ್ ಅವರೂ ಕೂಡ ಸತತವಾಗಿ ಕೆಲಸ ಮಾಡುತ್ತಿದ್ದರು. ಸಾಕಷ್ಟು ವಿದ್ಯಾವಂತರಾಗಿರುವ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸೂಕ್ತ ಎಂದು ಚಿಂತನೆ ನಡೆಸಿದ್ದಾರೆ. ಅಕಸ್ಮಾತ್ ಚುನಾವಣೆಯಲ್ಲಿ ಸೋಲಾದರೆ ಪರ್ಯಾಯ ನಾಯಕರ ಹುಡುಕಾಟ ನಡೆಸಬೇಕಾಗುತ್ತದೆ.ಉತ್ತರ ಕರ್ನಾಟಕ ಭಾಗದಲ್ಲಿ ಎಚ್.ವೈ.ಮೇಟಿ ಅವರಿಂದ ತೆರವಾದ ಸ್ಥಾನಕ್ಕೆ ಬಿ.ಬಿ.ಚಿಮ್ಮನಕಟ್ಟಿ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು.

ಚಿಮ್ಮನಕಟ್ಟಿಯವರ ಆರೋಗ್ಯ ಸರಿಯಿಲ್ಲ. ಕುರುಬ ಸಮುದಾಯದಲ್ಲಿ ಆ ಭಾಗದಲ್ಲಿ ಪ್ರಬಲ ನಾಯಕರಾದ ಎಚ್.ವೈ.ಮೇಟಿ ಅವರನ್ನೇ ನೇಮಕಮಾಡಬೇಕೆಂದು ಕುರುಬ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಪದೇ ಪದೇ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದಾರೆ.ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿರುವ ಮೇಟಿ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಂಡರೆ ಮತ್ತಷ್ಟು ಮುಜುಗರಕ್ಕೀಡಾಗಬೇಕಾಗುತ್ತದೆ. ಆದರೆ ಮೇಟಿ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರಿಗೆ ಕ್ಲೀನ್‍ಚಿಟ್ ದೊರೆತಿದೆ. ಇದರ ಆಧಾರದ ಮೇಲೆ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಂಡರೂ ಆಶ್ಚರ್ಯವಿಲ್ಲ.

ಉತ್ತರಕರ್ನಾಟಕ, ಹಳೇ ಮೈಸೂರು, ಲಿಂಗಾಯತ, ಕುರುಬ ಸಮೀಕರಣಗೊಳಿಸಿ ಎರಡೂ ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಆದರೆ ಸಂಪುಟ ವಿಸ್ತರಣೆ ಚುನಾವಣಾ ಫಲಿತಾಂಶದ ಮೇಲೆ ನಿಂತಿದೆ.ನಿಧನ ನಂತರ ಹಳೇ ಮೈಸೂರು ಭಾಗದಲ್ಲಿ ಪ್ರಬಲ ಲಿಂಗಾಯತ ನಾಯಕರ ಕೊರತೆಯ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಪಕ್ಷ ವಿ.ಸೋಮಣ್ಣ ಅವರಿಗೆ ಗಾಳ ಹಾಕಿತ್ತು. ವಿ.ಸೋಮಣ್ಣ ಅವರು ಕಾಂಗ್ರೆಸ್ ಸೇರಿದ್ದರೆ, ಕಾಂಗ್ರೆಸ್‍ನಲ್ಲಿ ಲಿಂಗಾಯತ ಸಮುದಾಯಕ್ಕೆ ಏಕಮೇವ ದ್ವಿತೀಯ ನಾಯಕರಾಗಬಹುದಿತ್ತು ಎಂಬ ಲೆಕ್ಕಾಚಾರವಾಗಿತ್ತು. ಆದರೆ ಸೋಮಣ್ಣ ಕಾಂಗ್ರೆಸ್ ಸೇರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ನೀಡುವ ಮೂಲಕ ಆ ಸಮುದಾಯವನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಗಿದೆ. ಹಾಲಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ತಮ್ಮ ಅಧ್ಯಕ್ಷ ಸ್ಥಾನ ತೆರವುಗೊಳಿಸಿದರೆ ಒಕ್ಕಲಿಗ ಅಥವಾ ಲಿಂಗಾಯತರಿಗೆ ಆ ಸ್ಥಾನ ನೀಡುವ ಸಾಧ್ಯತೆ ಇದೆ. ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಇನ್ನಿಲ್ಲದ ಕಸರತ್ತನ್ನು ನಡೆಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin