ಕೊಡಗಿನಲ್ಲಿ ಜೀವಂತವಾಗಿರುವ ಪದ್ಧತಿ ವಿಮುಕ್ತಿಗೆ ಸರ್ಕಾರ ಕ್ರಮ : ತಿಮ್ಮಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

kagodu

ಬೆಂಗಳೂರು, ಏ.11- ಕೊಡಗಿನಲ್ಲಿ ಜೀತದಾಳು ಪದ್ಧತಿ ಜೀವಂತವಾಗಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜೀತದಾಳುಗಳ ಬಿಡುಗಡೆಗೆ ತಕ್ಷಣವೇ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಕೊಡಗು ಜಿಲ್ಲೆಯ ದಿಡ್ಡಹಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀತದಾಳುಗಳನ್ನು ಬಿಡುಗಡೆ ಮಾಡಿ ತಕ್ಷಣವೇ ಪುನರ್ವಸತಿ ಕಲ್ಪಿಸಲಾಗುವುದು ಎಂದರು. ದರಖಾಸ್ತು ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಿ ಜಮೀನು ಮಂಜೂರು ಮಾಡುವಂತೆ ಕ್ರಮಕೈಗೊಳ್ಳಲಾಗುವುದು. ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಮಂದಿ ಜೀತದಾಳುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾಲೀಕರು ಅವರ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಮತ್ತಿತರ ದಾಖಲೆ ಗಳನ್ನು ತಮ್ಮಲ್ಲೇ ಇಟ್ಟುಕೊಂಡಿ ದ್ದಾರೆ. ಜೀತಪದ್ಧತಿ ಈಗಾಗಲೇ ನಿರ್ಮೂಲನೆ ಯಾಗಿದ್ದರೂ ಇನ್ನೂ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಷಾದಿಸಿದರು.  ಮಾಲೀಕರಿಂದ ಆಧಾರ್‍ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಜೀತದಾಳು ಗಳಿಗೆ ಕೊಡಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ.  ಹಾಗೆಯೇ ಕಂದಾಯ ಭೂಮಿ ಗುರುತಿಸಿ ಮೂಲಸೌಲಭ್ಯ ಕಲ್ಪಿಸಲು ಮತ್ತು ನಿರಾಶ್ರಿತರು ಮನುಷ್ಯರಾಗಿ ಬದುಕಲು ಬೇಕಾಗುವ ಅಗತ್ಯಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ.

ದಿಡ್ಡಹಳ್ಳಿ ನಿರಾಶ್ರಿತರಿಗೆ ಹಕ್ಕು ಪತ್ರ ನೀಡಲು ಕ್ರಮ:

ಇನ್ನು ಒಂದು ವಾರದೊಳಗಾಗಿ ದಿಡ್ಡಹಳ್ಳಿ ನಿರಾಶ್ರಿತರಿಗೆ ಹಕ್ಕು ಪತ್ರ ನೀಡಲು ಕ್ರಮಕೈಗೊಳ್ಳ ಲಾಗುವುದು. 572 ಕುಟುಂಬಗಳನ್ನು ಕಾನೂನು ಪರಿಶೀಲಿಸದೆ ಒಕ್ಕಲೆಬ್ಬಿಸಲಾಗಿದೆ. ಈ ವಿಚಾರವಾಗಿ ಸಮಗ್ರವಾಗಿ ಚರ್ಚಿಸಿ ಶಾಶ್ವತ ನೆಲೆ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ. ನಿರಾಶ್ರಿತರು ನೆಲೆಸಿರುವ ಭೂಮಿ ಅರಣ್ಯ ಇಲಾಖೆ ಸೇರಿಲ್ಲ. ಕಂದಾಯ ಇಲಾಖೆಗೆ ಸೇರಿರುವುದು ಖಾತ್ರಿಯಾದರೆ ತಕ್ಷಣವೇ ಹಕ್ಕು ಪತ್ರ ನೀಡಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸುವುದು ಸರ್ಕಾರದ ಉದ್ದೇಶ ಎಂದರು.

ಕೊಡಗಿನಲ್ಲಿ ಅಕ್ರಮ ಕಾಫಿ ತೋಟಗಳಿರುವ ಬಗ್ಗೆ ಮಾಹಿತಿ ಬಂದಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುತ್ತದೆ ಎಂದ ಅವರು, ಅರಣ್ಯ ಬೆಳೆಸದೆ ಇರುವ ಭೂಮಿಯನ್ನು ಕಂದಾಯ ಇಲಾಖೆಗೆ ಮರಳಿ ವಾಪಸ್ ಪಡೆಯುವ ಬಗ್ಗೆ ಹೊಸ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಸಚಿವರಾದ ಎಚ್.ಆಂಜನೇಯ, ರಮಾನಾಥ್ ರೈ, ಶಾಸಕ ಸೋಮಶೇಖರ್, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ದಿಡ್ಡಹಳ್ಳಿ ನಿರಾಶ್ರಿತರ ಪ್ರತಿನಿಧಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin