ಉಪಚುನಾವಣೆ ಮತ ಎಣಿಕೆಗೆ ಕ್ಷಣಗಣನೆ, ಅಭ್ಯರ್ಥಿಗಳಲ್ಲಿ ಎದೆಯಲ್ಲಿ ಢವಢವ

ಈ ಸುದ್ದಿಯನ್ನು ಶೇರ್ ಮಾಡಿ

Nanjanagud-Gundlupete

ಮತ ಎಣಿಕೆ ಸಮಯ- ಬೆಳಗ್ಗೆ 8 ಗಂಟೆಂಯಿಂದ
ಗುಂಡ್ಲುಪೇಟೆ- ಸೆಂಟ್ಸ್‍ಜಾನ್ ಆಂಗ್ಲ ಮಾಧ್ಯಮ ಶಾಲೆ
ನಂಜನಗೂಡು -ಜೆಎಸ್‍ಎಸ್ ಪದವಿ ಕಾಲೇಜು

ಪ್ರಮುಖ ಅಭ್ಯರ್ಥಿಗಳು

ವಿ.ಶ್ರೀನಿವಾಸ್ ಪ್ರಸಾದ್-ಬಿಜೆಪಿ
ಕಳಲೆ ಕೇಶವಮೂರ್ತಿ- ಕಾಂಗ್ರೆಸ್
ನಿರಂಜನ್‍ಕುಮಾರ್- ಬಿಜೆಪಿ
ಗೀತಾಮಹದೇವಪ್ರಸಾದ್ – ಕಾಂಗ್ರೆಸ್

ಮತದಾನದ ಸರಾಸರಿ

ಗುಂಡ್ಲುಪೇಟೆ – 87.10%
ನಂಜನಗೂಡು – 77.56
ಬೆಂಗಳೂರು,ಏ.12- ಇಡೀ ರಾಜ್ಯದ ಗಮನವನ್ನೇ ತನ್ನತ್ತ ಸೆಳೆದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದೆ.   ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪನವರ ಕುರುಕ್ಷೇತ್ರವೆಂದೇ ಬಿಂಬಿತವಾಗಿರುವ ಎರಡು ಕ್ಷೇತ್ರಗಳ ಮತ ಎಣಿಕೆ ನಾಳೆ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು , ಬಹುತೇಕ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.   ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕಣದಲ್ಲಿರುವ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ. ವಿಜಯಲಕ್ಷ್ಮಿ ಯಾರ ಕೊರಳಗೆ ಎಂಬುದು ನಾಳೆ ತಿಳಿಯಲಿದೆ.

ಬೆಳಗ್ಗೆ 8 ಗಂಟೆಯಿಂದ ನಂಜನಗೂಡಿನ ದೇವಿರಮ್ಮಹಳ್ಳಿಯ ಜೆಎಸ್‍ಎಸ್ ಪದವಿ ಕಾಲೇಜು ಹಾಗೂ ಗುಂಡ್ಲುಪೇಟೆಯ ಸೆಂಟ್ಸ್‍ಜಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತಗಳ ಎಣಿಕೆ ನಡೆಯಲಿದೆ.   ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಉಭಯ ಕ್ಷೇತ್ರಗಳ ಉಪಸಮರದ ಫಲಿತಾಂಶವನ್ನು ರಾಜ್ಯದ ಜನತೆ ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಫಲಿತಾಂಶ 2018ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಭಾರೀ ಮಹತ್ವವನ್ನು ಪಡೆದುಕೊಂಡಿದೆ.

ಹಣೆಬರಹ ನಿರ್ಧಾರ:

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ತೊಡೆ ತಟ್ಟಿ ತಮ್ಮ ಸ್ವಾಭಿಮಾನವನ್ನೇ ಪಣಕ್ಕಿಟ್ಟಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್‍ಗೆ ಈ ಚುನಾವಣೆ ಅವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿದೆ.   ಸೋತರೆ ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಪ್ರಸಾದ್ ಚುನಾವಣೆಯಲ್ಲಿ ಸ್ವಾಭಿಮಾನವನ್ನು ಕೆಣಕಿ ತಮ್ಮ ಸಮುದಾಯದ ಮತಗಳನ್ನು ಸೆಳೆದು ರಣತಂತ್ರವನ್ನೇ ರೂಪಿಸಿದ್ದರು. ಇನ್ನು ಶ್ರೀನಿವಾಸ್ ಪ್ರಸಾದ್ ಅವರನ್ನು ತವರು ಜಿಲ್ಲೆಯಲ್ಲಿ ಮಣ್ಣು ಮುಕ್ಕಿಸಲೇಬೇಕೆಂದು ಪಣ ತೊಟ್ಟಿದ್ದ ಸಿದ್ದರಾಮಯ್ಯ ಬರೋಬ್ಬರಿ 20 ಸಚಿವರನ್ನು ಕ್ಷೇತ್ರದಲ್ಲಿ ಠಿಕ್ಕಾಣಿ ಹೂಡಿಸಿ ಪ್ರಚಾರ ನಡೆಸಿದ್ದರು.

ಒಂದೆಡೆ ಶ್ರೀನಿವಾಸ್ ಪ್ರಸಾದ್ ಸ್ವಾಭಿಮಾನವನ್ನು ಕೆಣಕಿದರೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಎರಡು ಬಾರಿ ಸೋಲಿನ ಅನುಕಂಪವನ್ನೇ ಬಂಡವಾಳ ಮಾಡಿಕೊಂಡಿದ್ದರು. ಇನ್ನು ಕಾಂಗ್ರೆಸ್‍ಗೆ ಸೆಡ್ಡು ಹೊಡೆದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ಪ್ರಸಾದ್ ಪರ ಭರ್ಜರಿ ಪ್ರಚಾರವನ್ನೇ ನಡೆಸಿದ್ದರು.   ಇಲ್ಲಿ ನಾನೇ ಅಭ್ಯರ್ಥಿ ಎಂದು ಪರಿಗಣಿಸಬೇಕು. 2018ರ ಚುನಾವಣೆಗೆ ನಾನು ಮುಖ್ಯಮಂತ್ರಿಯಾಗಬೇಕಾದರೆ ಪ್ರಸಾದ್ ಅವರನ್ನು ಗೆಲ್ಲಿಸಬೇಕೆಂದು ತಮ್ಮ ಸಮುದಾಯದ ಮತಗಳನ್ನು ಸೆಳೆಯಲು ಜಾತಿಯ ಟ್ರಂಪ್ ಕಾರ್ಡ್ ಬಳಸಿದ್ದರು.   ಅತ್ತ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ನಿಧನದಿಂದ ತೆರವಾಗಿದ್ದ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನಿ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿ ಅಭ್ಯರ್ಥಿ ನಿರಂಜನ್‍ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿಯೂ ಕೂಡ ಯಡಿಯೂರಪ್ಪ , ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ಮಾಜಿ ಸಚಿವರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.
ಬಿಗಿಭದ್ರತೆ:

ಮತ ಪೆಟ್ಟಿಗೆಗಳನ್ನಿಟ್ಟಿರುವ ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು , ಎಸ್ಪಿ ನೇತೃತ್ವದಲ್ಲಿ ದಿನದ 24 ಗಂಟೆಯೂ ಭದ್ರತೆ ನೀಡಲಾಗಿದೆ. ಮತ ಎಣಿಕೆಯ ಸುತ್ತಮುತ್ತ 144ರ ಸೆಕ್ಷನ್ ವಿಧಿಸಲಾಗಿದೆ.   ಎರಡು ಕ್ಷೇತ್ರಗಳಲ್ಲಿ ಸಿಐಎಸ್‍ಎಫ್‍ನ ಮೂರು ತುಕಡಿಗಳು, ರಾಜ್ಯ ಹಾಗೂ ಜಿಲ್ಲಾ ಶಸ್ತ್ರಸ್ತ್ರ ಮೀಸಲು ಪಡೆಯ ತುಕಡಿಗಳು, ಅಗ್ನಿಶಾಮಕ ತುರ್ತು ಸೇವೆ ಹಾಗೂ ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.   ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿಭದ್ರತೆ ಕೈಗೊಳ್ಳಲಾಗಿದ್ದು , ಚುನಾವಣಾಧಿಕಾರಿ ನಳಿನ್ ಅತುಲ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.  ಭಾನುವಾರ ನಡೆದ ಉಪಚುನಾವಣೆಯಲ್ಲಿ ನಂಜನಗೂಡಿನಲ್ಲಿ ಶೇ. 77.56ರಷ್ಟು ಮತದಾನವಾಗಿದೆ. ಗುಂಡ್ಲುಪೇಟೆಯಲ್ಲಿ ಶೇ. 87.10ರಷ್ಟು ಮತದಾನವಾಗಿತ್ತು.

ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳು ಗೆದ್ದೆ ಗೆಲ್ಲುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಟ್ಟಿಂಗ್ ದಂಧೆಯನ್ನು ಆರಂಭಿಸಿದ್ದಾರೆ.   ಎರಡೂ ಕ್ಷೇತ್ರಗಳಲ್ಲಿ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ಕಾಂಗ್ರೆಸï ಹಾಗೂ ಬಿ.ಜೆ.ಪಿ. ನಾಯಕರು, ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಕ್ಷೇತ್ರದಲ್ಲಿಯೇ ಬೀಡುಬಿಟ್ಟು ಪ್ರಚಾರ ನಡೆಸಿದ್ದರು. ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದರು. ಆ ಎಲ್ಲ ಕಾರ್ಯತಂತ್ರಗಳ ಪರಿಣಾಮ ಏನಾಗಿದೆ ಎಂಬುದು ನಾಳೆ ಗೊತ್ತಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin