ಮಾಜಿ ಶಾಸಕ ಜ್ಞಾನದೇವ ದೊಡ್ಡ ಮೇಟಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Doddameti--01

ಗದಗ,ಏ.12- ಮಾಜಿ ಶಾಸಕ ಜ್ಞಾನದೇವ ದೊಡ್ಡ ಮೇಟಿ (86) ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾಗಿದ್ದಾರೆ. ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಜ್ಜನ ರಾಜಕಾರಣಿ ಎಂದೇ ಹೆಸರು ಪಡೆದಿದ್ದ ಅವರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು.  ಜನಪರ ಕಾರ್ಯಗಳಲ್ಲಿ ತೊಡಗಿ ಸ್ನೇಹಜೀವಿಯಾಗಿದ್ದ ಮೇಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಕೆ.ಬಿ.ಕೋಳಿವಾಡ, ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಸಂಜೆ ರೋಣದಲ್ಲಿರುವ ಚಕ್ಕಲಿಯಲ್ಲಿ ದೊಡ್ಡ ಮೇಟಿಯವರ ಅಂತ್ಯಕ್ರಿಯೆ ನಡೆಯಲಿದೆ.

ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿ.ಅಂದಾನಪ್ಪ ದೊಡ್ಡಮೇಟಿ ಅವರ ಪುತ್ರರಾಗಿ 1933ರಲ್ಲಿ ಜನಿಸಿದ ಜ್ಞಾನದೇವ ದೊಡ್ಡಮೇಟಿ ಅವರು ಕನ್ನಡದಲ್ಲಿ ಎಂ.ಎ. ವಿದ್ಯಾಭ್ಯಾಸ ಮಾಡಿದ್ದು, ಪತ್ರಿಕೋದ್ಯಮ, ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು.  ಗದಗ ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಜನರ ಒತ್ತಾಯದ ಮೇರೆಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು, 1983, 1985ರಲ್ಲಿ ಎರಡುಬಾರಿ ಶಾಸಕರಾಗಿ ಆಯ್ಕೆಯಾಗಿ ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿದವರು.  ಮೂರನೇ ಬಾರಿ 1989ರಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಜನರು ನನ್ನನ್ನು ತಿರಸ್ಕರಿಸಿದ್ದಾರೆ. ಇನ್ನು ಚುನಾವಣೆ, ಸ್ಪರ್ಧೆ ಸಾಕು ಎಂದು ರಾಜಕಾರಣದಿಂದ ದೂರ ಸರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin