ಪಠ್ಯಪುಸ್ತಕ ಮುದ್ರಕರು ಮತ್ತು ಅಧಿಕಾರಿಗಳ ಜೊತೆ ಶಿಕ್ಷಣ ಸಚಿವ ತನ್ವೀರ್ ಸೇಠ್ ತುರ್ತು ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

tanveer

ಬೆಂಗಳೂರು.ಏ.13. ಶಾಲೆ ಮಕ್ಕಳಿಗೆ ನಿಗದಿತ ಸಮಯದಲ್ಲಿ ಪಠ್ಯಪುಸ್ತಕಗಳನ್ನು ವಿತರಿಸುವ ಸಲುವಾಗಿ ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಮುದ್ರಕರು ಮತ್ತು ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದರು. ಪಠ್ಯಪುಸ್ತಕ ಪರಿಷ್ಕರಣೆಗೊಂಡು ಅದನ್ನು ಮುದ್ರಿಸಿ ಬಳಿಕ ವಿದ್ಯಾರ್ಥಿಗಳಿಗೆ ತಲುಪಲು ವಿಳಂಬವಾಗಬಹುದು ಎಂಬ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಸಚಿವರು, ಪ್ರಸ್ತುತ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಕಾಗದಗಳ ದರ ಏರಿಕೆ ಮತ್ತು ಅದರ ಆಭಾವ ಬಗ್ಗೆ ಮುದ್ರಕರು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ಮೊದಲು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಮರೋಪಾದಿಯಲ್ಲಿ ಮುದ್ರಣ ಕಾರ್ಯ ಪೂರ್ಣಗೊಳಿಸಬೇಕು. ಈಗಾಗಲೇ ಸಮಯ ಆಭಾವವಿರುವುದರಿಂದ ಮೊದಲ ಸೆಮಿಸ್ಟರ್ ಪುಸ್ತಕಗಳನ್ನು ಸಕಾಲಕ್ಕೆ ತಲುಪಿಸಲು ಸನ್ನದ್ಧರಾಗಬೇಕು ಎಂದು ಸಚಿವರು ಸೂಚಿಸಿದರು.

ಕಾಗದಗಳನ್ನು ಬೇರೆ ರಾಜ್ಯಗಳಿಂದ ತರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಎಂಪಿಎಂ ಮುಚ್ಚಿದ್ದರಿಂದ ಈ ಸಮಸ್ಯೆ ಸೃಷ್ಠಿಯಾಗಿದೆ. ಅಲ್ಲದೆ, ಈ ಸನ್ನಿವೇಶವನ್ನು ಗಮನಿಸಿ ಕಾಗದ ಕಾರ್ಖಾನೆಗಳು ಬೆಲೆ ಏರಿಕೆಯಿಂದ ಮುದ್ರಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ಮುದ್ರಕರು ತಂದರು.  ನಿಮ್ಮ ಸಮಸ್ಯೆಗಳು ಅರ್ಥವಾಗುತ್ತದೆ. ತುರ್ತು ಹಣಕಾಸಿನ ನೆರವು ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಪರಿಹರಿಸುತ್ತೇನೆ. ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ವಿತರಣೆಯಲ್ಲಿ ತಡಮಾಡಬೇಡಿ ಎಂದು ಹೇಳಿದರು. ಸಚಿವರ ಸ್ಪಂದನೆಯಿಂದ ಕರ್ನಾಟಕ ಮುದ್ರಕರ ಸಂಘ ಕೂಡ, ಪಠ್ಯ ಪುಸ್ತಕಗಳ ಸಕಾಲದಲ್ಲಿ ಮುದ್ರಿಸಿ ಕೊಡಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin