ಬಿಎಂಟಿಸಿ ಬಸ್‍ಗಳಲ್ಲಿ ಚಿಲ್ಲರೆ ಕಿರಿಕಿರಿ ತಪ್ಪಿಸಲು ಸ್ಮಾರ್ಟ್ ಕಾರ್ಡ್, ಎಲೆಕ್ಟ್ರಿಕ್ ಬಸ್’ಗಳ ಖರೀದಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--0021

ಬೆಂಗಳೂರು, ಏ.13- ನಗರದ ಬಿಎಂಟಿಸಿ ಬಸ್‍ಗಳಲ್ಲಿ ಸಾರ್ವಜನಿಕರಿಗೆ ಚಿಲ್ಲರೆ ಅನಾನುಕೂಲತೆಯಿಂದ ಆಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಸ್ಮಾರ್ಟ್ ಕಾರ್ಡ್‍ಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಟಿಸಿಯ ಸಾಮಾನ್ಯ ಹಾಗೂ ವೋಲ್ವೋ ಬಸ್‍ಗಳಲ್ಲಿನ ದರ ಪರಿಷ್ಕರಣೆಯನ್ನು ಸಾರ್ವಜನಿಕರ ಅನುಕೂಲಕ್ಕೆ ಮಾಡಲಾಗಿದ್ದು, ಚಿಲ್ಲರೆ ಸಮಸ್ಯೆ ತಪ್ಪಿಸಲು ಸ್ಮಾರ್ಟ್ ಕಾರ್ಡ್ ಅನ್ನು ಬಳಕೆಗೆ ತರಲಾಗುತ್ತದೆ. ಇದು ಪ್ರೀಪೇಯ್ಡ್ ಮಾದರಿಯಲ್ಲಿ ದೊರೆಯಲಿದ್ದು, ಪ್ರಯಾಣ ಮಾಡಿದ ನಂತರ ಅದರ ದರ ಕಾರ್ಡ್‍ಗಳಲ್ಲಿ ಕಡಿತಗೊಳ್ಳಲಿದೆ ಎಂದು ವಿವರಿಸಿದರು.

ಟೋಲ್ ದರ ಹೆಚ್ಚಳದಿಂದ ಮಂಡಳಿಗೆ 2.50 ಕೋಟಿ ಹೊರೆಯಾಗುತ್ತಿದೆ ಎಂದ ಅವರು, ನಾಲ್ಕು ನಿಗಮಗಳಲ್ಲಿನ (ಈಶಾನ್ಯ, ವಾಯುವ್ಯ ಸೇರಿದಂತೆ) ನೌಕರರ ವರ್ಗಾವಣೆ ಕುರಿತಂತೆ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ನಂತರ ಜ್ಯೇಷ್ಠತೆ ಆಧಾರದ ಮೇಲೆ ವರ್ಗಾವಣೆ ಮಾಡಲಾಗುವುದು ಎಂದರು.

ನಗರಕ್ಕೆ ಎಲೆಕ್ಟ್ರಿಕ್ ಬಸ್:

ಬಿಎಂಟಿಸಿಯಿಂದ ಎಲೆಕ್ಟ್ರಿಕ್ ಬಸ್‍ಗಳನ್ನು ಖರೀದಿಸಿ ಸಂಚಾರಕ್ಕೆ ಸಿದ್ಧತೆ ಮಾಡಲಾಗಿದೆ. ಒಟ್ಟಾರೆ ನಗರಕ್ಕೆ ಅಗತ್ಯವಿರುವ ಬಸ್‍ಗಳ ಪೈಕಿ 150 ಬಸ್‍ಗಳ ಖರೀದಿಗೆ ಅಂತಿಮ ಹಂತದ ಪ್ರಕ್ರಿಯೆ ನಡೆದಿದೆ.  1500 ಬಸ್‍ಗಳನ್ನು ಸರ್ಕಾರ ಉಚಿತವಾಗಿ ನೀಡಲಿದ್ದು, ಗುತ್ತಿಗೆ ಆಧಾರದಲ್ಲಿ 1500 ಬಸ್‍ಗಳನ್ನು ಪಡೆದುಕೊಳ್ಳುತ್ತಿದೆ. ಒಟ್ಟಾರೆ ನಗರದ ಬಸ್‍ಗಳ ಸಂಖ್ಯೆ 6 ಸಾವಿರದಿಂದ 9 ಸಾವಿರಕ್ಕೆ ಹೆಚ್ಚಳವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮಾರ್ಕೊಪೋಲೋ ವಿಲೇವಾರಿ:

ಸಾರಿಗೆ ಸಂಸ್ಥೆಯಲ್ಲಿ ಮಾರ್ಕೊಪೋಲೋ ಬಸ್‍ಗಳಿಂದ ನಿಗಮಕ್ಕೆ ನಷ್ಟವಾಗಿದ್ದಲ್ಲದೆ, ಇದರ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಸ್‍ಗಳನ್ನು ಹರಾಜಿನಲ್ಲಿ 1 ಲಕ್ಷದಷ್ಟು ಕನಿಷ್ಠ ಬೆಲೆಗೆ ಕೇಳಿದ್ದರು. ಹಾಗಾಗಿ ಇಡೀ ಬಸ್‍ಗಳ ಬದಲಿಗೆ ಬಿಡಿ ಭಾಗಗಳಿಗೆ ಐದಾರು ಲಕ್ಷಕ್ಕೆ ಮಾರಾಟ ಮಾಡಿದ್ದೇವೆ. ಒಟ್ಟು ಕೆಎಸ್‍ಆರ್‍ಟಿಸಿಯ 45 ಬಸ್ ಹಾಗೂ ಬಿಎಂಟಿಸಿಯ 96 ಬಸ್‍ಗಳ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದರು.

3000 ಹೊಸ ಬಸ್ : 

ಬೆಂಗಳೂರು,ಏ.13-ಈ ವರ್ಷದ ಅಂತ್ಯದೊಳಗೆ ಹೊಸದಾಗಿ ಮೂರು ಸಾವಿರ ಬಸ್‍ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರ್ಪಡೆ ಮಾಡಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 350 ಹೊಸ ಬಸ್‍ಗಳನ್ನು ಸದ್ಯದಲ್ಲೇ ಖರೀದಿಸುತ್ತಿದ್ದು, ಅವು ವಿಕಲಚೇತನ ಪ್ರಯಾಣಿಕರ ಸ್ನೇಹಿಯಾಗಿರುತ್ತದೆ.   ಅಲ್ಲದೆ ಸುಪ್ರೀಂಕೋರ್ಟ್ ಆದೇಶದಂತೆ ಬಿ.ಎಸ್.4 ಬಸ್‍ಗಳನ್ನೇ ಖರೀದಿಸಲಾಗುವುದು. ಪ್ರಯಾಣಿಕರಿಗೆ ಕೈ ಗೆಟುಕುವ ದರದಲ್ಲಿ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣ ದರ ಇಳಕೆಯಾಗಿದ್ದು , ಮುಂದಿನ ದಿನಗಳಲ್ಲಿ ಗ್ರೂಪ್ ಪ್ರಯಾಣ ದರದ ರಿಯಾಯ್ತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin