ರಾಜ್ಯಕ್ಕೆ ಬರಲಿದೆ ಪಂಜಾಬ್‍ನ ಸೈನೇಜ್ ವಿಶೇಷ ಮೇವು

ಈ ಸುದ್ದಿಯನ್ನು ಶೇರ್ ಮಾಡಿ

Punjab--01

ಬೆಂಗಳೂರು,ಏ.13- ರಾಜ್ಯಾದ್ಯಂತ ಆವರಿಸಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸಮರ್ಪಕ ಪ್ರಮಾಣದ ಮೇವು ಲಭ್ಯವಾಗದೆ ಕಂಗಾಲಾಗಿದ್ದ ರಾಜ್ಯಕ್ಕೆ ಇದೀಗ ಪಂಜಾಬ್‍ನಿಂದ ಸೈನೇಜ್ ಎಂಬ ವಿಶೇಷ ಮೇವು ಬರಲಿದೆ. ಸೈನೇಜ್ ಎಂಬ ವಿಶೇಷ ಮೇವನ್ನು ಪ್ರತಿ ಟನ್‍ಗೆ 1320 ರೂ.ಗಳಂತೆ ರಾಜ್ಯಕ್ಕೆ ಅಗತ್ಯದಷ್ಟು ಪ್ರಮಾಣದಲ್ಲಿ ಒದಗಿಸಲು ಪಂಜಾಬ್ ಸರ್ಕಾರ ಒಪ್ಪಿಗೆ ನೀಡಿದ್ದು, ಇದರ ಬೆನ್ನಲ್ಲೇ ಬರಗಾಲ ಪರಿಸ್ಥಿತಿಯ ಪರಿಶೀಲನೆಗೆ ಸಭೆ ನಡೆಸಿದ ಸಂಪುಟ ಉಪಸಮಿತಿ, ತಕ್ಷಣವೇ ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಈ ಮೇವನ್ನು ತರಿಸಿಕೊಳ್ಳಲು ಸೂಚನೆ ನೀಡಿದೆ.

ಪಂಜಾಬ್‍ನಲ್ಲಿ ಗೋವುಗಳಿಗೆ ಮೇವಿನ ಸಲುವಾಗಿಯೇ ಮೆಕ್ಕೆ ಜೋಳ ಬೆಳೆಯುವ ಪರಿಪಾಠವಿದ್ದು, ಬೆಳೆದ ಮೆಕ್ಕೆ ಜೋಳವನ್ನು ಪಡೆದ ಮೇಲೆ ದಂಟನ್ನು ವಿಶೇಷ ತಂತ್ರಜ್ಞಾನವನ್ನು ಬಳಸಿ ಪುಡಿ ಮಾಡಿ ಸಂಗ್ರಹಿಸಿಡಲಾಗುತ್ತದೆ.  ಹೀಗೆ ಸಂಗ್ರಹಿಸಿಡಲಾದ ಮೇವಿಗೆ ಅಗತ್ಯದ ರಾಸಾಯನಿಕ ಹಾಕಿ ಅದರ ಹಸಿತನವನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ಹೇಳಿದ್ದು, ಸಂಗ್ರಹಿಸಿಡುವ ಈ ಮೇವು ಒಂದು ವರ್ಷ ಕಾಲ ತನ್ನ ಹಸಿತನವನ್ನು ಉಳಿಸಿಕೊಂಡು ಬಳಕೆಗೆ ಯೋಗ್ಯವಾಗಿರುತ್ತದೆ.

ರಾಜ್ಯದಲ್ಲಿ ಅಗತ್ಯದ ಮೇವಿಗಾಗಿ ಹುಡುಕಾಟ ನಡೆಸಿ ವಿಫಲವಾದ ರಾಜ್ಯ ಸರ್ಕಾರಕ್ಕೆ ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಜಾನುವಾರುಗಳಿಗೆ ಒದಗಿಸಲು ಮೇವು ಸಿಗಲಿಲ್ಲ.  ಈ ಹಿನ್ನೆಲೆಯಲ್ಲಿ ನೆರೆಯ ಆಂಧ್ರಪ್ರದೇಶದಲ್ಲಿ ಲಭ್ಯವಾದ ಮೇವನ್ನು ತಂದು ರೈತರಿಗೆ ಒದಗಿಸುತ್ತಿತ್ತಾದರೂ ಅದು ಒಣಮೇವು ಮತ್ತು ಗುಣಮಟ್ಟದಲ್ಲೂ ಉತ್ತಮವಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು.

ಇದೇ ಕಾರಣಕ್ಕಾಗಿ ಅಧಿಕಾರಿಗಳ ತಂಡ ಪಂಜಾಬ್‍ಗೆ ಹೋಗಿ ಅಲ್ಲಿನ ಸರ್ಕಾರವನ್ನು ಸಂಪರ್ಕಿಸಿ ಸೈನೇಜ್ ಎಂಬ ವಿಶೇಷ ಮೇವಿನ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು ತಕ್ಷಣದಿಂದಲೇ ಅಗತ್ಯ ಪ್ರಮಾಣದಷ್ಟು ಸೈನೇಜ್ ಒದಗಿಸಲು ಪಂಜಾಬ್ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಆಯಾ ಜಿಲ್ಲಾಧಿಕಾರಿಗಳು ತಮ್ಮ ಬೇಡಿಕೆಗೆ ಅನುಗುಣವಾಗಿ ಈ ವಿಶೇಷ ಸೈನೇಜ ಮೇವನ್ನು ತರಿಸಿಕೊಳ್ಳಲು  ಸೂಚನೆ ನೀಡಲಾಗಿದ್ದು ಮೇವಿಗಾಗಿ ಎದ್ದಿರುವ ಹಾಹಾಕಾರ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿದೆ.

200 ಕೋಟಿ ಬಿಡುಗಡೆ:

ಈ ಮಧ್ಯೆ ಕುಡಿಯುವ ನೀರಿನ ಸಲುವಾಗಿ ಒಟ್ಟು ಇನ್ನೂರು ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದ್ದು ಇದರ ಪೈಕಿ 100 ಕೋಟಿ ರೂ.ಗಳನ್ನು ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗೆ , ಇನ್ನು 100 ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿಗಳ ನಿಧಿಗೆ ಒದಗಿಸಲು ತೀರ್ಮಾನಿಸಲಾಗಿದೆ.
ಬರಪರಿಹಾರ ಕಾಮಗಾರಿಯ ಸಂದರ್ಭದಲ್ಲಿ ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ಸ್ವಯಂ ಆಗಿ ತೀರ್ಮಾನ ತೆಗೆದುಕೊಂಡು ಕೆಲಸ ಮಾಡಲು ಒಂದಷ್ಟು ಪ್ರಮಾಣದ ಹಣ ಬೇಕು ಎಂದು ಶಾಸಕರು ಪಕ್ಷ ಬೇಧ ಮರೆತು ಸರ್ಕಾರವನ್ನು ಈ ಹಿಂದೆ ಆಗ್ರಹಪಡಿಸಿದ್ದರು.

ಇದನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಉಪಸಮಿತಿ ಇದೀಗ ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಗಳಿಗೆ ನೂರು ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಿದ್ದು,ಇದೇ ರೀತಿ ಅಗತ್ಯ ಬಿದ್ದಲ್ಲಿ ಕೊಳವೆ ಬಾವಿ ತೆಗೆಯಲು,ದುರಸ್ಥಿ ಮಾಡಲು,ಕುಡಿಯುವ ನೀರಿನ ಮತ್ತಿತರ ಕೆಲಸಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳ ನಿಧಿಗೆ ನೂರು ಕೋಟಿ ರೂ ಬಿಡುಗಡೆ ಮಾಡಲು ತೀರ್ಮಾನ ಮಾಡಿದೆ. ಇನ್ನು ಕೇಂದ್ರ ಸರ್ಕಾರ ರೈತರ ಬೆಳೆಹಾನಿಗೆ ಪರಿಹಾರ ನೀಡುವ ಸಂಬಂಧ ಒದಗಿಸಿರುವ 1200 ಕೋಟಿ ರೂ.ಗಳಷ್ಟು ಹಣವನ್ನು ತಕ್ಷಣವೇ ರಾಜ್ಯದ ಹದಿನೇಳು ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಇಂದು ನಡೆದ ಸಭೈ ತೀರ್ಮಾನಿಸಿದೆ. ಇನ್ನುಳಿದ ರೈತರ ಬ್ಯಾಂಕ್ ಖಾತೆಗಳನ್ನು ಅಪ್‍ಲೋಡ್ ಮಾಡಲಾಗುತ್ತಿದ್ದು ಅದು ಪೂರ್ಣಗೊಂಡ ಕೂಡಲೇ ಅವರ ಖಾತೆಗಳಿಗೂ ಹಣ ಜಮೆ ಮಾಡಲು ಸರ್ಕಾರ ತೀರ್ಮಾನಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin