ಅಂಬೇಡ್ಕರ್ ಶೈಕ್ಷಣಿಕ ಸಂಸ್ಥೆಗೆ ರಾಷ್ಟ್ರಪತಿ ಶಂಕುಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

Pranab-Mukharjee

ಬೆಂಗಳೂರು, ಏ.14– ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಎಂಬ ಅಂತಾರಾಷ್ಟ್ರೀಯ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗೆ ರಾಷ್ಟ್ರಪತಿ ಪ್ರಣಬ್‍ಮುಖರ್ಜಿ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜಯಂತಿ ಸ್ಮರಣಾರ್ಥ ರಾಜ್ಯ ಸರ್ಕಾರವು ಪ್ರಾರಂಭಿಸುತ್ತಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗೆ ಇಂದು ಮಧ್ಯಾಹ್ನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಶಂಕುಸ್ಥಾಪನೆ ಮಾಡಲಾಯಿತು.

ಈ ಸಂಸ್ಥೆಯು ಅರ್ಥಶಾಸ್ತ್ರ, ಸಾಮಾಜಿಕ ವಿಜ್ಞಾನ ಹಾಗೂ ಸಾರ್ವಜನಿಕ ಆಡಳಿತದಲ್ಲಿ ಶಿಕ್ಷಣ ನೀಡಲಿದೆ. ಈ ಸಂಸ್ಥೆಯಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯ ಭೋಧನೆ ವ್ಯವಸ್ಥೆ ಇರಲಿದೆ.  ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 43 ಎಕರೆ ಪ್ರದೇಶದಲ್ಲಿ 360 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆ ನಿರ್ಮಾಣಗೊಳ್ಳಲಿದೆ. ಈ ಸಂಸ್ಥೆಗೆ ರಾಜ್ಯ ಸರ್ಕಾರ 275 ಕೋಟಿ ಭರಿಸಿದರೆ, ಕಾರ್ಪೊರೇಟ್ ವಲಯದಿಂದ 75 ಕೋಟಿ ರೂ. ಭರಿಸಲಾಗುತ್ತದೆ.

ಮೊದಲ ಹಂತದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಕಚೇರಿ, ಗ್ರಂಥಾಲಯ, ಉಪಹಾರ ಗೃಹ, ವಸತಿ ಗೃಹ, ಇನ್ನಿತರೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.
ಶಂಕುಸ್ಥಾಪನೆ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್. ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ, ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಷ್ಟ್ರಪತಿ ಭಾಷಣ :

ಬೆಂಗಳೂರು, ಏ.14- ಈಗಾಗಲೇ ಬೆಂಗಳೂರು ಶಿಕ್ಷಣ ಕೇಂದ್ರವಾಗಿ ಹೆಸರು ಪಡೆದಿದೆ. ಇಲ್ಲಿಯೇ ಅರ್ಥಶಾಸ್ತ್ರ ಸಂಶೋಧನೆಗೆ ಮೀಸಲಾದ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಆರಂಭಿಸುತ್ತಿರುವುದು ನಗರದ ಹಿರಿಮೆಗೆ ಗರಿ ಮೂಡಿಸಿದಂತಾಗಿದೆ ಎಂದು ರಾಷ್ಟ್ರಪತಿ ಪ್ರಣಬ್‍ಮುಖರ್ಜಿ ಅಭಿಪ್ರಾಯಪಟ್ಟರು. ವಿಧಾನಸೌಧದಲ್ಲಿ ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್‍ನ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಂದೆ- ತಾಯಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ, ಅವರ ಗುರಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಹಾಗಿದ್ದೂ ಸಹ ಅಂಬೇಡ್ಕರ್ ಅವರು ಇದನ್ನು ಒಪ್ಪುತ್ತಿರಲಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ನಿರ್ಧರಿಸಬಹುದು ಎಂದು ಪ್ರತಿಪಾದಿಸುತ್ತಿದ್ದರು.

ಮಹಾತ್ಮಗಾಂಧಿ, ವಿವೇಕಾನಂದ ಸೇರಿದಂತೆ ಹಲವು ಮಹನೀಯರು ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳುತ್ತಿದ್ದಾರೆ. ಇದರಿಂದ ಭಾರತದಲ್ಲಿ ಉನ್ನತ ಮಟ್ಟದ ಶಿಕ್ಷಣ ಲಭ್ಯವಿಲ್ಲ ಎಂಬರ್ಥವಲ್ಲ. ನಮ್ಮ ದೇಶದ ಐಐಟಿಗಳು ವಿಶ್ವದ ಯಾವುದೇ ಶಿಕ್ಷಣ ಸಂಸ್ಥೆಗಳೊಂದಿಗೆ ಸ್ಪರ್ಧಿಸುವಷ್ಟು ಗುಣಮಟ್ಟ ಸಾಧಿಸಿದೆ ಎಂದರು.

ಸರ್ ಸಿ.ವಿ.ರಾಮನ್, ಅಮರ್ಥಸೇನ್ ಅವರಂತಹ ಮಹನೀಯರು ನೋಬೆಲ್ ಪ್ರಶಸ್ತಿ ಗಳಿಸಿದ್ದಾರೆ. ಅವರೆಲ್ಲ ಅಧ್ಯಯನ ಮಾಡಿದ್ದು, ಭಾರತೀಯ ವಿಶ್ವವಿದ್ಯಾಲಯಗಳಲ್ಲೇ. ಆದರೆ, ಇತ್ತೀಚೆಗೆ ಭಾರತದಲ್ಲಿ ಅಂತಹ ಪ್ರತಿಭಾವಂತರನ್ನು ಕಾಣಲಾಗುತ್ತಿಲ್ಲ. ನೋಬೆಲ್ ಪಡೆಯಲು ಅರ್ಹರಾದವರು ಬರಲೇ ಇಲ್ಲ. ಇನ್ನು ಮುಂದಾರು ವಿವಿಗಳು ಅಂತಹ ವಿದ್ಯಾರ್ಥಿಗಳನ್ನು ತಯಾರು ಮಾಡಲಿ. ಇಡೀ ವಿಶ್ವದ ವಿದ್ಯಾರ್ಥಿಗಳನ್ನು ಭಾರತೀಯ ವಿವಿಗಳು ಆಕರ್ಷಿಸುವಂತಾಗಲಿ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ವಿವಿ ಸ್ಥಾಪಿಸಲು ಮುಂದಾಗಿರುವುದು ಪ್ರಶಂಸಾರ್ಹ. ಪ್ರತಿ ವರ್ಷ 1600 ಮಿನಿಯನ್ ಜನರು ಉದ್ಯೋಗ ಕ್ಷೇತ್ರಕ್ಕೆ ಬರುತ್ತಾರೆ. ಆದರೆ, ಅವರಲ್ಲಿ ಕೌಶಲ್ಯ ಹೊಂದಿರುವವರು ಮಾತ್ರ ಬಹಳ ಕಡಿಮೆ. ಕೌಶಲ್ಯವೇ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ಭಾರತದಲ್ಲಿ ಅತಿ ಉತ್ತಮ ಶೈಕ್ಷಣಿಕ ಮತ್ತು ಆರೋಗ್ಯ ಸೌಲಭ್ಯಗಳು ಇರುವುದು ಕರ್ನಾಟಕ ಮಾತ್ರ ಎಂದು ರಾಜ್ಯಪಾಲ ವಿ.ಆರ್.ವಾಲಾ ನುಡಿದರು.
ಇದು ರಾಜ್ಯ ಸರ್ಕಾರದ ಪ್ರಗತಿಯ ಸಂಕೇತ. ರಾಷ್ಟ್ರಕ್ಕಾಗಿ ಬಲಿದಾನ ಗೈದ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಆರಂಭಿಸುತ್ತಿರುವುದು ಸ್ವಾಗತಾರ್ಹ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಅರ್ಥಶಾಸ್ತ್ರಜ್ಞನಲ್ಲ. ಆದರೂ ಹಣಕಾಸು ಸಚಿವನಾಗಿ 13 ಬಜೆಟ್‍ಗಳನ್ನು ನೀಡಿದ್ದೇನೆ. ಪ್ರತಿ ಭಾರಿಯೂ ಬಜೆಟ್ ಸಿದ್ದಪಡಿಸುವಾಗ ಗ್ರಾಮೀಣ ಭಾಗದ ಜನರ ಅನ್ನದ ಭವಣೆಯನ್ನು ಅರಿತು ಬಜೆಟ್ ಸಿದ್ದಪಡಿಸಿದ್ದೇನೆ. ಹಾಗಾಗಿಯೇ ಅನ್ನಭಾಗ್ಯ ಯೋಜನೆ ತರಲು ಸಾಧ್ಯವಾಯಿತು. ಇದಕ್ಕೆ ಎಷ್ಟೇ ಟೀಕಿಗಳು ಬಂದರೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin