ಬಾಂಬ್ ನಾಗ ಅಲ್ಲ ‘ನೋಟ್ ನಾಗ’ : ಮನೆಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಂತೆ ಕಂತೆ ನೋಟುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--07
ಬೆಂಗಳೂರು, ಏ.14- ಉದ್ಯಮಿಯೊಬ್ಬರ ಅಪಹರಣ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ಬಿಬಿಎಂಪಿ ಮಾಜಿ ಸದಸ್ಯ ವಿ.ನಾಗರಾಜ್ ಅಲಿಯಾಸ್ ಬಾಂಬ್ ನಾಗನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ  ಕೋಟಿ ಕೋಟಿ ಹಳೇ ನೋಟಿನ ಕಂತೆಗಳು ಸಿಕ್ಕಿವೆ.  ಬಾಂಬ್‍ನಾಗನ  ಶ್ರೀರಾಮಪುರ  ಕಚೇರಿ ಮತ್ತು ಮನೆ  ಮೇಲೆ 50ಕ್ಕೂ ಹೆಚ್ಚು ಪೊಲೀಸರು ಇಂದು ಮುಂಜಾನೆ 5 ಗಂಟೆಗೆ   ದಾಳಿ ನಡೆಸಿದಾಗ ಹಳೇ ನೋಟಿನ ಕಂತೆಗಳ ಜತೆಗೆ  2 ಡ್ರಾಗರ್ ಮತ್ತು  3 ಮಚ್ಚುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Bomb-Naga--08

ಪೊಲೀಸರ ದಾಳಿ ವಿಷಯ ತಿಳಿಯುತ್ತಿದ್ದಂತೆ ಬಾಂಬ್‍ನಾಗ ಪ್ರತಿಯೊಂದು ಮಹಡಿಗೂ ಕಬ್ಬಿಣದ ಗೇಟ್‍ಗಳಿಂದ ಭದ್ರ ಕೋಟೆಯಂತೆ ನಿರ್ಮಿಸಿಕೊಂಡಿರುವ ಮೂರು ಮಹಡಿಯ ಮನೆಯೊಳಗೆ ಸೇರಿಕೊಂಡು ಪ್ರತಿ ಮಹಡಿಯ ಬಾಗಿಲುಗಳಿಗೆ ಶಿಷ್ಯರಿಂದ ಹೊರಗಿನಿಂದ ಬೀಗ ಹಾಕಿಸಿದ್ದಾನೆ.  ನೆಲಮಹಡಿಯ ಬಾಗಿಲು ಮುರಿಯಲು ಹರಸಾಹಸಪಟ್ಟ ಪೊಲೀಸರು ಸುತ್ತಿಗೆಯಿಂದ ಬೀಗ ಮುರಿದು ಆವರಣ ಪ್ರವೇಶಿಸಿ ಮನೆಯ ಕಿಟಕಿ ಒಡೆದು ಒಳ ಪ್ರವೇಶಿಸಬೇಕಾಯಿತು.

 

ನೆಲಮಹಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಮೊದಲ ಮಹಡಿಗೆ ಹೋದ ಪೊಲೀಸರು ಹರಸಾಹಸಪಟ್ಟು ಅಲ್ಲೂ ಕಬ್ಬಿಣದ ಗೇಟ್‍ನ ಬೀಗ ಮುರಿದು ಒಳ ಹೋಗಬೇಕಾಯಿತು.  ಮೊದಲ ಮಹಡಿಯಲ್ಲಿ ಮಹಿಳೆಯರು ಮಾತ್ರ ವಾಸವಿರುವುದು ಗೊತ್ತಾಗಿದೆ. ಕಟ್ಟಡದಲ್ಲಿನ ಪ್ರತಿಯೊಂದು ಕೊಠಡಿಗಳಿಗೂ ಬೀಗ ಜಡಿದಿದ್ದು, ದಾಳಿ ಮಾಡಿರುವ ಪೊಲೀಸರಿಗೆ ಬೀಗ ಮುರಿಯುವುದೇ ಸವಾಲಿನ ಕೆಲಸವಾಗಿತ್ತು.

ಎರಡನೇ ಮಹಿಡಿಯ ಮನೆಗೆ ಪ್ರವೇಶಿಸಿದ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದ ನಾಗನ ಪತ್ನಿ ಮಾತ್ರ. ಈಕೆಯನ್ನು  ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಟೆರೆಸ್‍ನ ಬಾಗಿಲು  ತೆರೆದು ನಾಗ ಪರಾರಿಯಾಗಿದ್ದಾನೆ.

Bomb-Naga--03

ಶ್ರೀರಾಮಪುರ ಠಾಣೆಯಲ್ಲಿ 2011ರಲ್ಲಿ ಬಾಂಬ್‍ನಾಗನ ರೌಡಿಪಟ್ಟಿ ತೆಗೆದು ಹಾಕಿದ್ದರು. ನೆಲಮಂಗಲ, ಶ್ರೀರಾಮಪುರ, ದಾಬಸ್‍ಪೇಟೆ ಸೇರಿ ಹಲವು ಕಡೆ ಈತನ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Bomb-Naga--05

 ಕಿಡ್ನಾಪ್:

ಕಳೆದ ಮಾ.18ರಂದು ರಿಯಲ್‍ಎಸ್ಟೇಟ್  ಉದ್ಯಮಿ ಉಮೇಶ್ ಎಂಬುವರನ್ನು  ಕಿಡ್ನಾಪ್ ಮಾಡಲಾಗಿತ್ತು. ಅಪಹರಣಕಾರರು ಉಮೇಶ್‍ನನ್ನು ಬಾಂಬ್‍ನಾಗನ ಮನೆಗೆ ಕರೆತಂದು 50 ಲಕ್ಷ ಹಫ್ತಾ ವಸೂಲಿ ಮಾಡಿದ್ದರು ಎನ್ನಲಾಗಿದೆ. ಉಮೇಶ್ ಈ ಕುರಿತಂತೆ ಯಾವುದೇ ದೂರು ನೀಡಿರಲಿಲ್ಲ.  ಆದರೆ,  ಏ.7ರಂದು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದ್ದ ಅವರು ನನಗೆ ಕೆಲವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಕೋರ್ಟ್‍ನಿಂದ ಸರ್ಚ್‍ವಾರೆಂಟ್ ಪಡೆದ ಹೆಣ್ಣೂರು ಇನ್ಸ್‍ಪೆಕ್ಟರ್ ಶ್ರೀನಿವಾಸ್ ಮತ್ತಿತರ ಪೊಲೀಸ್ ಅಧಿಕಾರಿಗಳ ತಂಡ ಇಂದು ಮುಂಜಾಜೆ ಏಕಾಏಕಿ ನಾಗನ ಮನೆ ಮೇಲೆ ದಾಳಿ ನಡೆಸಿದೆ.

ರೆಸಾರ್ಟ್‍ನಲ್ಲಿ ಅಡ್ಡಾ:

ನಾಗದೇವನಹಳ್ಳಿಯಲ್ಲಿರುವ ತನ್ನ  ರೆಸಾರ್ಟ್‍ನ್ನೇ ಅಡ್ಡಾ ಮಾಡಿಕೊಂಡಿದ್ದ  ಬಾಂಬ್ ನಾಗ ಅಲ್ಲಿಂದಲೇ ಬ್ಲಾಕ್ ಆ್ಯಂಡ್ ವೈಟ್ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

Bomb-Naga--02

ತೀವ್ರ ಶೋಧ:

ಪೊಲೀಸರ ದಾಳಿ ನಂತರ ಸಿನಿಮಿಯ ರೀತಿಯಲ್ಲಿ ತಪ್ಪಿಸಿಕೊಂಡಿರುವ ಬಾಂಬ್‍ನಾಗನಿಗಾಗಿ ಪೊಲೀಸರು ಶ್ರೀರಾಮಪುರದಲ್ಲಿರುವ ಆತನ ಅಕ್ಕಪಕ್ಕದ ಮನೆಗಳಲ್ಲೂ ತೀವ್ರ ಶೋಧ ನಡೆಸುತ್ತಿದ್ದಾರೆ.  ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್‍ಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ನಾಗ ತಲೆಮರೆಸಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.  ನಾಗದೇವನಹಳ್ಳಿಯಲ್ಲಿರುವ ರೆಸಾರ್ಟ್‍ನಲ್ಲೂ ಕೋಟಿ ಕೋಟಿ ಹಳೇ ನೋಟುಗಳು ಸಂಗ್ರಹವಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ  ಅಲ್ಲೂ ದಾಳಿ ಪೊಲೀಸರು ದಾಳಿ ನಡೆಸಿದ್ದಾರೆ.

Bomb-Naga--06

ಹಿನ್ನೆಲೆ:

ರೌಡಿಶೀಟರ್ ಹಿನ್ನೆಲೆ ಹೊಂದಿದ್ದ ಬಾಂಬ್‍ನಾಗ  ಶ್ರೀರಾಮಪುರ ಸುತ್ತಮುತ್ತ ಸಮಾಜಸೇವಕನಂತೆ ಪೋಸ್‍ಕೊಟ್ಟು  ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಿಂತು ವಿಜಯಶಾಲಿಯಾಗಿದ್ದ. ಮತ್ತೊಂದು ಬಾರಿ ನಾಗ ಮತ್ತು ಆತನ ಪತ್ನಿ ಲಕ್ಷ್ಮೀಕೂಡ ಎರಡು ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದರು.  ಬಿಬಿಎಂಪಿ ರಚನೆಯಾದ ನಂತರವೂ ಚುನಾವಣೆಗೆ ನಿಂತಿದ್ದ ಬಾಂಬ್‍ನಾಗ ಸೋಲು ಕಂಡಿದ್ದ. ರಾಜಕಾರಣಿಯಾದ ನಂತರವೂ ಆತ ತನ್ನ ರೌಡಿ ಕೃತ್ಯವನ್ನು ನಿಲ್ಲಿಸಿರಲಿಲ್ಲ. ಒಂದು ಬಾರಿ ಪೊಲೀಸರು ಆತನ ಮನೆ ಮೇಲೆ ದಾಳಿ ನಡೆಸಿದ್ದಾಗ ತನ್ನ ನೂರಾರು ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದ.

ಈತನ ಉಪಟಳ ಮಟ್ಟಹಾಕಲು ಪೊಲೀಸರು ಎಷ್ಟೇ ಪ್ರಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಮತ್ತೆ ಪೊಲೀಸರಿಂದ ತಪ್ಪಿಸಿಕೊಂಡಿರುವ ನಾಗನಿಗಾಗಿ ಹುಡುಕಾಟ ಮುಂದುವರೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin