ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿದೆ ಮರಗಳ ಮಾರಣ ಹೋಮ

ಈ ಸುದ್ದಿಯನ್ನು ಶೇರ್ ಮಾಡಿ

gudibande
-ಶ್ರೀನಾಥ್ ಜಿ.ವಿ., ಗುಡಿಬಂಡೆ

ಹಸಿರೇ ಉಸಿರು, ಕಾಡೇ ನಮ್ಮ ಸಂಪತ್ತು. ಮರಗಳಿಂದಲೇ ಉತ್ತಮ ಮಳೆ. ಮುಂತಾದ ಸ್ಲೋಗನ್‍ಗಳು ಈಗ ಕೇವಲ ಪಠ್ಯಗಳಲ್ಲಿ ಮಾತ್ರ ಅಡಗಿದೆಯೋ ಎಂಬ ಅನುಮಾನ ದಟ್ಟವಾಗಿ ಕಾಡತೊಡಗಿದೆ.ಒಂದೆಡೆ ಮರ, ಗಿಡಗಳಿಲ್ಲದೆ ಮಳೆಯ ಅಭಾವ ಹೆಚ್ಚಾಗಿ ರಾಜ್ಯದ ಬಹುತೇಕ ಕಡೆ ಬರಗಾಲ ಆರಂಭಿಸಿದರೆ ಮತ್ತೊಂದೆಡೆ ಕೆಲ ಸ್ವಾರ್ಥಿಗಳು ಹಣ ಮಾಡುವ ಉದ್ದೇಶದಿಂದ ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ.
ಹೇಳಿ ಕೇಳಿ, ಚಿಕ್ಕಬಳ್ಳಾಪುರ ಇಂತಹ ಬರ ನಾಡಿಗೆ ಹೆಸರು ವಾಸಿಯೆಂದರೆ ತಪ್ಪಾಗದು. ಜಿಲ್ಲೆಯಲ್ಲಿರುವ ಅಲ್ಪಸ್ವಲ್ಪ ಮರಗಳಿಂದ ಸ್ವಲ್ಪವಾದರೂ ಮಳೆ ಆಗುತ್ತಿದೆ. ಈಗ ಅದಕ್ಕೂ ಕುತ್ತು ಬಂದಂತಿದೆ.

ಜಿಲ್ಲೆಯಲ್ಲಿರುವ ಕೆಲ ಪ್ರಭಾವಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಮರಗಳನ್ನು ಕಡಿದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿ ದಿನ ಎಗ್ಗಿಲ್ಲದೆ ಮರಗಳ ಮಾರಣ ಹೋಮ ಮಾಡಿ ಮರದ ತುಂಡುಗಳನ್ನು ಎಗ್ಗು – ಮೆಗ್ಗಿಲ್ಲದೆ ದುಷ್ಕರ್ಮಿಗಳು ಸಾಗಿಸುತ್ತಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿ ನಿತ್ಯ ಸುಮಾರು 30 ಕ್ಕೂ ಹೆಚ್ಚು ಲಾರಿ ಲೋಡ್‍ಗಳಷ್ಟು ಅಂದರೆ ಕನಿಷ್ಠ 200 ಕ್ಕೂ ಹೆಚ್ಚು ಟನ್‍ಗಳಷ್ಟು ಕಟ್ಟಿಗೆಗಳನ್ನು ಹಗಲಿನ ವೇಳೆಯಲ್ಲೇ ಸಾಗಿಸುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿಕುಳಿತಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆ ಏಳು ತಾಲ್ಲೂಕುಗಳನ್ನು ಹೊಂದಿದ್ದು, 43 ಕ್ಕೂ ಹೆಚ್ಚು ಕಟ್ಟಿಗೆ ಸಾಮಿಲ್‍ಗಳು ಇದ್ದು, ಪ್ರತಿಯೊಂದು ಮಿಲ್‍ಗಳಲ್ಲೂ ಪ್ರತಿ ನಿತ್ಯ ನೂರಾರು ಟನ್‍ಗಳಷ್ಟು ಕಟ್ಟಿಗೆಗಳು ಆಮದು ಮತ್ತು ರಫ್ತು ಮಾಡಲಾಗುತ್ತಿದೆ.

ಕಟ್ಟಿಗೆ ಮಿಲ್‍ಗಳಿಗೆ ಅರಣ್ಯದಲ್ಲಿ ಮತ್ತು ಗ್ರಾಮಗಳ ಜಮೀನುಗಳಲ್ಲಿ ಕಡಿಯುವ ಮರಗಳು ಅರಣ್ಯ ಸಿಬ್ಬಂದಿಯ ಕೈವಾಡವಿಲ್ಲದೆ ಸಾಮಿಲ್‍ಗಳಿಗೆ ಬರಲು ಸಾಧ್ಯವಿಲ್ಲ ಎಂದು ಜನ ದೂರುತ್ತಾರೆ.  ಪ್ರತಿ ನಿತ್ಯ ಸುಮಾರು ಟನ್‍ಗಳಷ್ಟು ಕಟ್ಟಿಗೆಗಳನ್ನು ಕಡಿದು ಟ್ರ್ಯಾಕ್ಟರ್ ಹಾಗೂ ಲಾರಿಗಳ ಮೂಲಕ ಸಾಗಿಸಲಾಗುತ್ತಿದೆ. ಅದನ್ನು ಕಂಡವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ದೂರವಾಣಿ ಮೂಲಕ ತಿಳಿಸಿದರೆ, ನಿರ್ಲಕ್ಷ್ಯದ ಉತ್ತರ ಸಿಗುತ್ತದೆಯೇ ಹೊರತು ಇಲ್ಲಿಯವರೆಗೂ ಒಂದು ವಾಹನವನ್ನು ಸಹ ಹಿಡಿದು ಪ್ರಕರಣ ದಾಖಲಿಸಿಲ್ಲ. ಮರಗಳ್ಳರು ಮರಗಳನ್ನು ಕಡಿದು ತಂದು ಸಾಗಿಸುತ್ತಾ ಮಾರ್ಗ ಮಧ್ಯೆ ಅರಣ್ಯ ಅಧಿಕಾರಿಗಳಿಗೆ ಸಿಕ್ಕರೂ ಅವರಿಗೆ ಲಂಚ ನೀಡಿ, ನಿರಾಳವಾಗಿ ಮರ ಸಾಗಣೆ ಮಾಡುತ್ತಿದ್ದಾರೆ. ಕೇವಲ ಕಾಟಾಚಾರಕ್ಕೆ ಮಾತ್ರ ನಾವುಗಳು ಅರಣ್ಯ ರಕ್ಷಣೆ ಮಾಡುತ್ತೇವೆ ಎಂದು ಹೇಳುವ ಅರಣ್ಯ ಅಧಿಕಾರಿಗಳು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಿಗೆಗಳ ಸಾಕಾಣಿಕೆಯನ್ನು ಮಾತ್ರ ತಡೆಯಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸ್ಥಳೀಯ ಮುಖಂಡರು ದೂರಿದ್ದಾರೆ.

ಒಟ್ಟಾರೆಯಾಗಿ ಹವಾಮಾನದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಬಿಸಿಲಿನ ತಾಪಮಾನ ಜಾಸ್ತಿಯಾಗಲು ಒಂದಲ್ಲ ಒಂದು ರೀತಿಯಲ್ಲಿ ಅರಣ್ಯ ಇಲಾಖೆಯವರ ಬೇಜಾವಾಬ್ದಾರಿ ತನವೇ ಕಾರಣ ಎಂಬುದು ಎದ್ದು ಕಾಣುತ್ತಿದೆ. ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿರುವುದನ್ನು ಕಂಡು ಅರಣ್ಯ ಇಲಾಖೆಯ ಸಿಬ್ಬಂದಿಗೆ ದೂರವಾಣಿ ಮೂಲಕ ತಿಳಿಸಿದರೆ, ನಾನು ಅಲ್ಲಿ ಇದ್ದೇನೆ, ಇಲ್ಲಿ ಇದ್ದೇನೆ, ಸದರಿ ವಾಹನ ಯಾವ ಕಡೆ ಹೋಗುತ್ತಿದೆ ನಾನು ನಮ್ಮ ಸಿಬ್ಬಂದಿಗೆ ತಿಳಿಸುತ್ತೇನೆ, ಅವರು ಹೋಗಿ ವಾಹನ ಪರಿಶೀಲನೆ ಮಾಡುತ್ತಾರೆ ಎಂಬಂತಹ ಮಾತುಗಳನ್ನು ಅಧಿಕಾರಿಗಳು ಹೇಳಿ ನುಣುಚಿಕೊಳ್ಳುತ್ತಾರೆ ಎಂದು ಪರಿಸರವಾದಿ ಎನ್.ನವೀನ್‍ಕುಮಾರ್ ಮತ್ತಿತರರು ನೇರವಾಗಿ ಆರೋಪ ಮಾಡುತ್ತಾರೆ.

ಗುಡಿಬಂಡೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಅರಣ್ಯಗಳಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ಅತಿ ಹೆಚ್ಚು ಸಾಮಿಲ್‍ಗಳಿದ್ದು, ಬೇರೆ ತಾಲೂಕುಗಳಲ್ಲಿ ಕಡಿದ ಮರಗಳನ್ನು ಇಲ್ಲಿಗೆ ಹೆಚ್ಚು ಸಾಗಣೆ ಮಾಡಲಾಗುತ್ತಿದೆ.ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳಿಗೂ ಮರಗಳನ್ನು ಕದ್ದುಮುಚ್ಚಿ, ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮರಗಿಡಗಳಿಂದ ದೊರೆಯುವ ಗಾಳಿಯಲ್ಲಿ ಬಹಳಷ್ಟು ಆರೋಗ್ಯಕಾರಿ ಅಂಶಗಳು ಅಡಗಿವೆ. ಆದರೆ ಇಂದು ಮರಗಳ ನಾಶದಿಂದ ಫ್ಯಾನ್, ಏಸಿ ಗಾಳಿ ಕುಡಿದು ಬದುಕುವಂತಾಗಿದೆ.ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅರಣ್ಯವೇ ಬರಿದಾಗಿಬಿಡುತ್ತಿದೆ. ಈಗಲಾದರೂ ಅರಣ್ಯ ಇಲಾಖೆಯ ಸಿಬ್ಬಂದಿಯವರು ನಿದ್ದೆಯಿಂದ ಎದ್ದು ಅಕ್ರಮ ಮರಗಳ ಸಾಗಾಣಿಕೆಯನ್ನು ತಡೆಯುತ್ತಾರೆಯೇ ನೋಡಬೇಕಾಗಿದೆ.
ಮರ ಕಡಿದರೆ ಹೊತ್ತಿ ಉರಿಯುವುದು ಧರೆ. ಬಹುಶಃ ಅದು ನಿಜವಾಗುತ್ತಿದೆಯೇನೋ ಅನ್ನಿಸುತ್ತಿದೆ. ಏಕೆಂದರೆ, ದಿನೇ ದಿನೇ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಜಾಗತಿಕ ತಾಪಮಾನವೂ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಮಾರಣ ಹೋಮವೇ ಎಂದರೆ ತಪ್ಪಾಗಲಾರದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin