ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಗಳಿಗೆ ಲಾಬಿ ಜೋರು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

ಬೆಂಗಳೂರು, ಏ.15- ಎರಡೂ ಕ್ಷೇತ್ರಗಳ ಉಪಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವುದಾಗಿ ಹೇಳುತ್ತಿದ್ದಂತೆಯೇ ದೆಹಲಿಯಲ್ಲಿ ಲಾಬಿ ಜೋರಾಗಿದೆ. ಹೈಕಮಾಂಡ್‍ನೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೆಹಲಿಗೆ ತೆರಳುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ಹಿಂಡು ದೆಹಲಿಯಲ್ಲಿ ಬೀಡುಬಿಟ್ಟಿದೆ.  ಕಾಂಗ್ರೆಸ್‍ನ ರಾಜಕೀಯ ಚಟುವಟಿಕೆಗಳು ದೆಹಲಿಗೆ ಸ್ಥಳಾಂತರಗೊಂಡಿವೆ. ಖಾಲಿ ಇರುವ ಎರಡು ಸ್ಥಾನಗಳನ್ನು ಉತ್ತರ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದ ಇಬ್ಬರಿಗೆ ನೀಡಬೇಕೆಂಬುದು ಮುಖ್ಯಮಂತ್ರಿಗಳ ಇರಾದೆಯಾಗಿದೆ.

ಉತ್ತರ ಕರ್ನಾಟಕದಿಂದ ಹಿಂದುಳಿದವರಿಗೆ ಹಾಗೂ ಹಳೇ ಮೈಸೂರು ಭಾಗದಿಂದ ಲಿಂಗಾಯಿತ ಸಮುದಾಯದವರಿಗೆ ನೀಡುವ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಪಡೆದ ಹಲವು ಆಕಾಂಕ್ಷಿಗಳು ಹೈಕಮಾಂಡ್ ವರಿಷ್ಠರ ದುಂಬಾಲು ಬಿದ್ದಿದ್ದಾರೆ.  ಉಪಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ನೀಡಲಾಗುವುದು ಎಂಬುದಾಗಿ ಕೇಳಿಬಂದಿತ್ತು. ಅಲ್ಲದೆ, ಎಚ್.ವೈ.ಮೇಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅದೇ ಸಮುದಾಯದವರೊಬ್ಬರನ್ನು ನೇಮಕ ಮಾಡಲಾಗುವುದು ಎಂದು ತೀರ್ಮಾನಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಹಲವರು ಸಚಿವ ಹುದ್ದೆ ಪಡೆಯಲು ಕಸರತ್ತು ನಡೆಸಿದ್ದಾರೆ. ಗೀತಾ ಮಹದೇವಪ್ರಸಾದ್ ಅವರು ಪ್ರಥಮ ಬಾರಿಗೆ ಶಾಸಕರಾಗಿದ್ದಾರೆ. ಹಲವಾರು ಬಾರಿ ಗೆದ್ದಿರುವ ನಮಗೇ ಸಚಿವ ಸ್ಥಾನ ನೀಡಬೇಕೆಂದು ತಮ್ಮ ಹಕ್ಕನ್ನು ವರಿಷ್ಠರ ಮುಂದೆ ಮಂಡಿಸಿದ್ದಾರೆ.  ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿ ನಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಡಲಾಯಿತು. ಆದರೆ ಈವರೆಗೆ ನಮಗೆ ಆ ಸ್ಥಾನ ನೀಡಿಲ್ಲ. ಹಾಗಾಗಿ ಸಚಿವ ಸ್ಥಾನವನ್ನಾದರೂ ನೀಡಬೇಕು, ಇಲ್ಲ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಎಸ್.ಆರ್.ಪಾಟೀಲ್ ಅವರು ದೆಹಲಿಯಲ್ಲಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಇದೇ ರೀತಿ ಅಪ್ಪಾಜಿನಾಡಗೌಡ ಪಾಟೀಲ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹಳೇ ಮೈಸೂರು ಭಾಗದ 9 ಜಿಲ್ಲೆಗಳಲ್ಲಿ ಲಿಂಗಾಯಿತರ ಪ್ರಾತಿನಿಧ್ಯತೆ ಇಲ್ಲ. ಅಲ್ಲಿಗೆ ಸಚಿವ ಸ್ಥಾನ ನೀಡಬೇಕಾದರೆ ತಿಪಟೂರಿನ ಷಡಕ್ಷರಿ ಅಥವಾ ಈಗ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೀತಾ ಮಹದೇವಪ್ರಸಾದ್ ಅವರಿಗೆ ನೀಡಬೇಕಿದೆ. ಈ ಎಲ್ಲಾ ಲೆಕ್ಕಾಚಾರ ದೆಹಲಿಯಲ್ಲಿ ನಡೆಯುತ್ತಿದೆ.  ಕುರುಬ ಸಮುದಾಯದಲ್ಲಿ ಹೊಸದುರ್ಗ ಶಾಸಕ ಬಿ.ಜೆ.ಗೋವಿಂದಪ್ಪ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಈಗಾಗಲೇ ಚಿತ್ರದುರ್ಗ ಜಿಲ್ಲಾ ಪ್ರಾತಿನಿಧ್ಯ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಎಸ್.ಎಸ್.ಶಿವಳ್ಳಿ ಅವರೂ ಕೂಡ ಲಾಬಿ ನಡೆಸುತ್ತಿದ್ದಾರೆ.
ಮೇಲ್ಮನೆಗೆ ತೀವ್ರಗೊಂಡ ಲಾಬಿ:

ಮೇಲ್ಮನೆಯಲ್ಲಿ ಖಾಲಿ ಇರುವ ಮೂವರು ನಾಮನಿರ್ದೇಶಿತ ಸದಸ್ಯರನ್ನು ಆರು ತಿಂಗಳಿನಿಂದ ನೇಮಕ ಮಾಡಲು ಸಾಧ್ಯವಾಗಿಲ್ಲ. ಈಗ ಅದಕ್ಕೂ ಚಾಲನೆ ದೊರೆತಿದೆ. ಸಿ.ಎಂ.ಲಿಂಗಪ್ಪ, ಮೋಹನ್ ಕೊಂಡಜ್ಜಿ, ಕೆ.ಪಿ.ನಂಜುಂಡಿ ಅವರನ್ನು ನಾಮನಿರ್ದೇಶನ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. ಹಲವಾರು ಕಾರಣಗಳಿಂದ ನೇಮಕಾತಿ ಮುಂದೂಡುತ್ತಲೇ ಬರಲಾಗಿತ್ತು. ಈಗ ಸಾಕಷ್ಟು ಆಕಾಂಕ್ಷಿಗಳು ಮೇಲ್ಮನೆ ಸದಸ್ಯನ ಸ್ಥಾನಕ್ಕೆ ಒತ್ತಡ ತರುತ್ತಿದ್ದಾರೆ. ರಾಣಿ ಸತೀಶ್, ಜಿ.ಸಿ.ಚಂದ್ರಶೇಖರ್, ಮುಖ್ಯಮಂತ್ರಿ ಚಂದ್ರು, ಉಮಾದೇವಿ ಅವರ ಹೆಸರುಗಳು ಕೂಡ ಕೇಳಿಬರುತ್ತಿವೆ.

ಚುನಾವಣಾ ಫಲಿತಾಂಶದ ವಿವರಗಳನ್ನು ನೀಡಲು ಮುಂದಿನ ಚುನಾವಣೆಯ ಬಗ್ಗೆ ಪಕ್ಷವನ್ನು ಸಜ್ಜುಗೊಳಿಸಲು ಸಾಮಾಜಿಕ ನ್ಯಾಯದಡಿಯಲ್ಲಿ ಅಧಿಕಾರ ಹಂಚಿಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದೆಯಾದರೂ ಆಕಾಂಕ್ಷಿಗಳು ಹೈಕಮಾಂಡ್ ಮೇಲೆ ಸಾಕಷ್ಟು ಒತ್ತಡ ತರುತ್ತಿರುವ ಹಿನ್ನೆಲೆಯಲ್ಲಿ ಯಾರು ಸಂಪುಟ ಸೇರುತ್ತಾರೆ, ಯಾರು ಮೇಲ್ಮನೆಗೆ ನೇಮಕವಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin