ಐತಿಹಾಸಿಕ ಅರಮನೆ ಎಸ್ಟೇಟ್ ಮೇಲೆ ಕರ್ನಾಟಕಕ್ಕೆ ಹಕ್ಕಿಲ್ಲ : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Suprem-Court

ನವದೆಹಲಿ, ಏ.16- ಉದ್ಯಾನನಗರಿ ಬೆಂಗಳೂರಿನ ಹೃದಯಭಾಗದಲ್ಲಿರುವ ಐತಿಹಾಸಿಕ ಅರಮನೆ ಎಸ್ಟೇಟ್ ಮೇಲೆ ಕರ್ನಾಟಕಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಧಮ ರಾಜಕುಮಾರನ ಪರವಾಗಿ ಮೈಸೂರು ದಿವಾನದಿಂದ ಸುಮಾರು 117 ವರ್ಷಗಳ ಹಿಂದೆಯೇ ಇದನ್ನು ಖರೀದಿಸಿರುವುದರಿಂದ ಕರ್ನಾಟಕ ಇದರ ಮೇಲೆ ಹಕ್ಕು ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದರಿಂದಾಗಿ ಕಾನೂನು ಸಂಘರ್ಷದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ.ಅರಮನೆ ಎಸ್ಟೇಟ್ 24 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪಾರಂಪರಿಕ ಸ್ವತ್ತು ಬೆಂಗಳೂರಿನ ಪ್ರತಿಷ್ಠಿತ ಅರಮನೆ ರಸ್ತೆಯಲ್ಲಿದ್ದು, ಅನೇಕ ವಾಣಿಜ್ಯ ಕಟ್ಟಡಗಳು ಮತ್ತು ಬಂಗಲೆಗಳು ಇಲ್ಲಿ ತಲೆ ಎತ್ತಿವೆ.  ಸ್ಥಳದ ಅಧಿಭೋಗದಾರರ (ಸ್ವಾಧೀನದಾರರ) ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸೆಕ್ಷನ್ 67ರ ಅಡಿ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಈ ಹಿಂದೆ ರಾಜ್ಯ ಸರ್ಕಾರ ಹೊರಡಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್‍ನ ಏಕ ಸದಸ್ಯ ಪೀಠವು ರದ್ದುಗೊಳಿಸಿ ಆದೇಶ ನೀಡಿತ್ತು. ಈಗ ಆ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಪುನಃ ಸ್ಥಾಪಿಸಿದ್ದು, ಈ ಸ್ವತ್ತಿನ ಮೇಲೆ ರಾಜ್ಯ ಯಾವುದೇ ಹಕ್ಕು ಹೊಂದಿಲ್ಲ ಎಂದು ಹೇಳಿದೆ.

ಇತರರಿಗೆ ಸೇರದ ಎಲ್ಲ ಸ್ವತ್ತುಗಳು ರಾಜ್ಯ ಸರ್ಕಾರಕ್ಕೆ ಸೇರುತ್ತದೆ ಎಂದು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸೆಕ್ಷನ್ 67ರಲ್ಲಿ ತಿಳಿಸಲಾಗಿದೆ.
ಈ ಎಸ್ಟೇಟ್‍ನ ಸ್ವತ್ತಿಗೆ ಸಂಬಂಧಿಸಿದಂತೆ ಮೂಲ ವರ್ಗಾವಣೆ ಒಪ್ಪಂದ ಪತ್ರ ಕಾರ್ಯಗತಗೊಂಡು 100 ವರ್ಷಗಳಾಗಿವೆ ಹಾಗೂ ಈ ಎಸ್ಟೇಟ್‍ನ ಭೂಮಿಯಲ್ಲಿ ಅನೇಕ ಭಾಗಗಳನ್ನು ರಾಜ್ಯ ಸ್ವಾಧೀನ ಮಾಡಿಕೊಂಡ ನಂತರ, ಮೂಲ ವರ್ಗಾವಣಾ ಒಪ್ಪಂದ ಪತ್ರವನ್ನು ಅಕ್ರಮ ಎಂದು ಘೋಷಿಸಬೇಕೆಂಬ ರಾಜ್ಯದ ಒತ್ತಾಯಕ್ಕೆ ನಾವು ಅವಕಾಶ ನೀಡುವುದಿಲ್ಲ.

ಅದೇ ರೀತಿ ನಂತರದ ಎಲ್ಲ ಸ್ವತ್ತುಗಳ ಹಸ್ತಾಂತರವನ್ನು ಅನೂರ್ಜಿತಗೊಳಿಸಬೇಕೆಂಬ ರಾಜ್ಯ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಗುಪ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.  ಪ್ರಥಮ ರಾಜಕುಮಾರನ ಪರವಾಗಿ ಆಗಿನ ಮೈಸೂರು ದಿವಾನರು ಇದನ್ನು ವಿಕ್ರಯ ಮಾಡಿದ್ದರು (ಖರೀದಿಸಿದ್ದರು). ಯುವರಾಜನ ವೈಯಕ್ತಿಕ ಹಣವನ್ನು ಸ್ವತ್ತಿಗೆ ಪ್ರತಿಫಲವಾಗಿ ನೀಡಲಾಗಿತ್ತು. ಕಾನೂನು ಬದ್ದವಾಗಿ ಮತ್ತು ನ್ಯಾಯಸಮ್ಮತವಾಗಿ ಈ ಖರೀದಿ ವ್ಯವಹಾರ ನಡೆದಿದೆ. ಹೀಗಿರುವಾಗ ಈ ಸ್ವತ್ತು ಹಸ್ತಾಂತರ ಒಪ್ಪಂದದಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ಆದ್ದರಿಂದ ಈ ಅಸ್ತಿಯ ಮೇಲೆ ಕರ್ನಾಟಕ ರಾಜ್ಯಕ್ಕೆ ಯಾವುದೇ ಹಕ್ಕು ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin