ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ, ಸಹಪಾಠಿಗಳ ಅಶ್ರುತರ್ಪಣ

ಈ ಸುದ್ದಿಯನ್ನು ಶೇರ್ ಮಾಡಿ

Belagavi-Students-Engineeri

ಬೆಳಗಾವಿ, ಏ.16- ಮಹಾರಾಷ್ಟ್ರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿ ಸಮುದ್ರದಲ್ಲಿ ಈಜಾಡುವ ಸಂದರ್ಭದಲ್ಲಿ ನೀರು ಪಾಲಾದ ಇಲ್ಲಿನ ಮರಾಠ ಮಂಡಲ್ ಇಂಜಿನಿಯರಿಂಗ್ ಕಾಲೇಜಿನ 7 ವಿದ್ಯಾರ್ಥಿಗಳ ಹಾಗೂ ಒಬ್ಬ ಉಪನ್ಯಾಸಕರ ಅಂತ್ಯಕ್ರಿಯೆಗೂ ಮುನ್ನ ಪೋಷಕರ ಆಕ್ರಂದನ ಅಲ್ಲಿ ಸೇರಿದ್ದ ಎಲ್ಲರ ಕಣ್ಣಾಲಿಗಳನ್ನು ತೋಯಿಸಿತು.  ತಮ್ಮ ಸಹಪಾಠಿಗಳ ಅಂತಿಮ ದರ್ಶನ ಪಡೆದ ಸಾವಿರಾರು ವಿದ್ಯಾರ್ಥಿಗಳು ಆಶ್ರುತರ್ಪಣ ಸಲ್ಲಿಸಿದ ದೃಶ್ಯ ಎಂತಹವರನ್ನು ಮನಕಲುಕುವಂತಿತ್ತು.  ಕಳೆದ ರಾತ್ರಿಯೇ ಮೃತ ದೇಹಗಳನ್ನು ನಗರಕ್ಕೆ ತರಲಾಗಿದ್ದು, ಕಾಲೇಜಿನ ಆವರಣದಲ್ಲೇ ಸಹಪಾಠಿಗಳು ಶ್ರದ್ಧಾಂಜಲಿ ಸಲ್ಲಿಸಿ ನಂತರ ಶವಗಳನ್ನು ಅವರವರ ಹುಟ್ಟೂರಿಗೆ ಕೊಂಡೊಯ್ಯಲಾಯಿತು.ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಗ್ರಾಮದ ಆರತಿ ಚವ್ಹಾಣಾ, ಕರುಣಾ ಬರಡೆ ಹಾಗೂ ತುರಮುರಿ ಗ್ರಾಮದ ಕಿರಣ ತಾಂಡೇಕ್ಕರ ಅವರ ಅಂತ್ಯಸಂಸ್ಕಾರ ತಡರಾತ್ರಿಯೇ ನಡೆಯಿತು.  ಇನ್ನುಳಿದಂತೆ ಅವಧೂತ, ಮಹೇಶ, ಮುಜಮಿಲ, ನಿತಿನ್ ಮುತ್ನಾಳ್ಕರ್ ಮತ್ತು ಮಾಯಾಕೋಲೆ ಅವರ ಶವಗಳನ್ನು  ಜಿಲ್ಲಾಸ್ಪತ್ರೆಯಿಂದ ಕೊಂಡೊಯ್ಯುವಾಗ ಪೋಷಕರ ರೋಧನೆ ಮುಗಿಲು ಮುಟ್ಟಿತ್ತು.  ಈ ಭೀಕರ ಘಟನೆಯನ್ನು  ಮೆಲಕು ಹಾಕಿ ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದರು.

ಇನ್ನೂ ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಜೀವ ಉಳಿಯಲಿ ಎಂದು ಪ್ರಾರ್ಥಿಸುತ್ತಿದ್ದರು.  ನಗರದಲ್ಲಿ ಶೋಕಮಯ ವಾತಾವರಣ ಸೃಷ್ಟಿಯಾಗಿತ್ತು. ಈ ಭಾಗದ ಶಾಸಕರು, ಸಂಸದರು ಸೇರಿದಂತೆ ಹಲವಾರು ಮುಖಂಡರು ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಸಾಂತ್ವನ ಹೇಳಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಅಲೆಯ ರಭಸಕ್ಕೆ ಸುಮಾರು 11 ಮಂದಿ ಮುಳುಗಿದ್ದು, ಇದರಲ್ಲಿ ಮೂವರನ್ನು ಮಾತ್ರ ರಕ್ಷಿಸಲಾಯಿತು. ಇದೊಂದು ಘೋರ ಘಟನೆ ಎಂದು ವಿದ್ಯಾರ್ಥಿಯೊಬ್ಬ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin