ಅಮಾಯಕ ಕೋತಿಗಳನ್ನು ವಿಷವುಣಿಸಿ ಕೊಂದ ಪಾಪಿಗಳಿಗೆ ಜನರ ಹಿಡಿಶಾಪ

ಈ ಸುದ್ದಿಯನ್ನು ಶೇರ್ ಮಾಡಿ

Monkeys--01

ಪಾಂಡವಪುರ, ಏ.17- ತಾಲೂಕಿನ ಪಟ್ಟಣಗೇರಿ ಗ್ರಾಮದ ಹೊರ ವಲಯದ ಬೆಟ್ಟದಲ್ಲಿ 30ಕ್ಕೂ ಹೆಚ್ಚು ಕೋತಿಗಳ ಮಾರಣ ಹೋಮ ನಡೆದಿದೆ. ಯಾರೋ ಕಿಡಿಗೇಡಿಗಳು ಕೋತಿಗಳಿಗೆ ವಿಷ ಉಣಿಸಿ ಮಾರಣ ಹೋಮ ನಡೆಸಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.  ಕೋತಿಗಳು ತೋಟಗಳಿಗೆ ನುಗ್ಗಿ ಕೀಟಲೆ ಮಾಡಿದ್ದಾವೆನ್ನುವ ಕಾರಣ ಒಡ್ಡಿ ಕೋತಿಗಳ ಗುಂಪಿಗೆ ವಿಷ ಉಣಿಸಿ ಕೊಂದು ಹಾಕಿದ ನಂತರ ಅವುಗಳನ್ನು ಗೋಣಿಚೀಲದಲ್ಲಿ ತಂದು ಕಿಡಿಗೇಡಿಗಳು ಇಲ್ಲಿ ಬಿಸಾಡಿ ಹೋಗಿರಬಹುದು ಎನ್ನಲಾಗಿದೆ.ಕೋತಿಗಳು ಬೇರೆ ಕಡೆಯಿಂದಲೋ ಅಥವಾ ಅಕ್ಕ ಪಕ್ಕದ ರೈತರ ಜಮೀನಿನ ತೋಟಗಳಿಗೆ ನುಗ್ಗಿ ದಾಂಧಲೆ ಮಾಡಿದ ಹಿನ್ನೆಲೆಯಲ್ಲಿ ಯಾರೋ ಕಿಡಿಗೇಡಿಗಳು ಕೋತಿಗಳಿಗೆ ವಿಷ ಉಣಿಸಿದ್ದಾರೆ ಎನ್ನಲಾಗಿದೆ.   ಬಳಿಕ ಅವುಗಳನ್ನು ನಿನ್ನೆ ರಾತ್ರಿ ಪಟ್ಟಣಗೇರಿ ಹೊರವಲಯದಲ್ಲಿರುವ ಬೆಟ್ಟಕ್ಕೆ (ಕಣಿವೆ ಬೋರಪ್ಪನ ದೇವಸ್ಥಾನದ ಬಳಿ) ತಂದು ಹಾಕಿದ್ದಾರೆ ಎನ್ನಲಾಗಿದೆ. ಕೋತಿಗಳ ಹಿಂಡಿನಲ್ಲಿ ಸಣ್ಣ ಕೋತಿ ಮರಿಯು ಸತ್ತಿದೆ. ಈ ದೃಶ್ಯವನ್ನು ನೋಡಿದ ಸಾರ್ವಜನಿಕರು ಕನಿಕರ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಸರ್ವೆ ಸಾಮಾನ್ಯವಾಗಿತ್ತು. ಜತೆಗೆ ಕಿಡಿಗೇಡಿಗಳ ಪೈಶಾಚಿಕ ಕೃತ್ಯಕ್ಕೆ ಹಿಡಿಶಾಪ ಹಾಕಿದರು.

ಕೋತಿಗಳನ್ನು ಕೊಂದವರು ಯಾರೇ ಆಗಲಿ ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣಗೇರಿ ಗ್ರಾಮದ ರವಿ ಎಸ್.ಗೌಡ ಹಾಗೂ ಲೋಕೇಶ್ ಕನಗನಹಳ್ಳಿ ಇತರರು ಆಗ್ರಹಿಸಿದರು.  ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾಗಲೀ, ಪೊಲೀಸ್ ಸಿಬ್ಬಂದಿಗಳಾಗಿ ಆಗಮಿಸದಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಧ್ಯಾಹ್ನ ನಂತರ ಅರಣ್ಯಾಧಿಕಾರಿಗಳ ಬದಲಿಗೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋತಿಗಳ ಸಾಮೂಹಿಕ ಅಂತ್ಯ ಸಂಸ್ಕಾರ :

ಕೋತಿಗಳು ಸತ್ತು ಬಿದ್ದಿದ್ದ ದೃಶ್ಯಗಳನ್ನು ಕಂಡ ಸುತ್ತಮುತ್ತಲ ಗ್ರಾಮಗಳ ನೂರಾರು ಯುವಕರು ದಾರಿ ಹೋಕರ ಬಳಿ ಹಣ ಸಂಗ್ರಹಿಸಿ ಎಲ್ಲಾ ಕೋತಿಗಳ ಅಂತ್ಯ ಕ್ರಿಯೆಯನ್ನು ನೆರವೇರಿಸಿದರು. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin