ಅನ್ನಭಾಗ್ಯ ಯೋಜನೆ ರಾಷ್ಟ್ರಕ್ಕೆ ಮಾದರಿ : ಸಚಿವ ಎ.ಮಂಜು

ಈ ಸುದ್ದಿಯನ್ನು ಶೇರ್ ಮಾಡಿ

m-manju
ಹಾಸನ, ಏ.18- ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಮಹದಾಸೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಯೊಜನೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣವೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಇದೀಗ ಕುಟುಂಬದ ಪ್ರತಿ ಸದಸ್ಯರಿಗೆ 7ಕೆಜಿ ಉಚಿತ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 2,09,000 ಕಾರ್ಡ್‍ದಾರರಿದ್ದು, ಅದರಲ್ಲಿ 1,44,000 ಕಾರ್ಡ್‍ಗಳನ್ನು ಆಧಾರ್‍ನೊಂದಿಗೆ ಲಿಂಕ್ ಮಾಡಲಾಗಿದೆ. ಬಾಕಿ ಕಾರ್ಡ್‍ದಾರರು ಶೀಘ್ರವಾಗಿ ತಮ್ಮ ಪಡಿತರ ಕಾರ್ಡ್ ಜತೆಗೆ ಆಧಾರ್ ಸಂಖ್ಯೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಉಸ್ತುವಾರಿ ಸಮಿತಿಯ ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಬಾಕಿ ಉಳಿದಿರುವ ಕಾರ್ಡ್‍ದಾರರನ್ನು ಪ್ರೇರೇಪಿಸಿ ಆಧಾರ್‍ಗೆ ಲಿಂಕ್ ಮಾಡಿಸಬೇಕು ಎಂದರು.

ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ 1000-1500 ಕಾರ್ಡ್‍ದಾರರಿದ್ದು, ಅವುಗಳನ್ನು 500ಕ್ಕೆ ಮಿತಿಗೊಳಿಸಿ ವಿಂಗಡಿಸಿ ಸಂಘ-ಸಂಸ್ಥೆಗಳ ಮೂಲಕ ಪಡಿತರ ವಿತರಣೆ ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದರು. ಶಾಸಕ ಹೆಚ್.ಎಸ್.ಪ್ರಕಾಶ್ ಮಾತನಾಡಿ, ಅನ್ನಬಾಗ್ಯ ಯೋಜನೆಗೆ ಕೋಟ್ಯಂತರ ರೂ. ವೆಚ್ಚ ಮಾಡಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಅದು ಜನತೆಗೆ ಪ್ರಾಮಾಣಿಕವಾಗಿ ತಲುಪಬೇಕು ಎಂದು ಹೇಳಿದರು.

ಜಿಲ್ಲಾದಿಕಾರಿ ವಿ.ಚೈತ್ರ ಮಾತನಾಡಿ, ಏ.1ರಿಂದ ಹೆಚ್ಚುವರಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದರ ಮೇಲುಸ್ತುವಾರಿ ಜಾಗೃತ ಸಮಿತಿಯನ್ನು ಸರ್ಕಾರವೇ ಆಯಾಯ ನ್ಯಾಯಬೆಲೆ ವ್ಯಾಪ್ತಿಯಲ್ಲಿ ನೇಮಿಸಿದೆ. ಆಹಾರ ಧಾನ್ಯ ಎತ್ತುವಳಿ ಬಗ್ಗೆ ನೇರವಾಗಿ ಗ್ರಾಹಕರಿಗೆ ಎಸ್.ಎಂ.ಎಸ್.ಸಂದೇಶ ರವಾನೆಯಾಗುತ್ತದೆ ಎಂದರು.ಜಿಪಂ ಅಧ್ಯಕ್ಷರಾದ ಶ್ವೇತಾ ದೇವರಾಜ್, ತಾಪಂ ಅಧ್ಯಕ್ಷ ಸತೀಶ್ ಕುಮಾರ್, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಕಂಠಮೂರ್ತಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin