ಉಪಚುನಾವಣೆಯಲ್ಲಿ ಸೋಲಿನ ಆಘಾತ : 23ಕ್ಕೆ ಬಿಜೆಪಿ ಆತ್ಮಾವಲೋಕನ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Krishna-Join-BJP

ಬೆಂಗಳೂರು, ಏ.18– ನಂಜನಗೂಡು -ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅನಿರೀಕ್ಷಿತ ಅಘಾತ ಕಂಡ ಬಿಜೆಪಿ ಇದೇ 23 ರಂದು ಆತ್ಮಾವಲೋಕನ ಸಭೆ ನಡೆಸಲಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಜಗದೀಶ್ ಶೆಟ್ಟರ್, ಕೇಂದ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಮುಖಂಡರಾದ ಆರ್.ಅಶೋಕ್ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು, ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕೆಂದು ಸೂಚಿಸಲಾಗಿದೆ.ಸಭೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಪರಾಜಿತ ಅಭ್ಯರ್ಥಿಗಳಾದ ವಿ.ಶ್ರೀನಿವಾಸ್ ಪ್ರಸಾದ್, ನಿರಂಜನ್‍ಕುಮಾರ್ ಭಾಗವಹಿಸ ಲಿದ್ದು, 2018ರ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ ಹಾಗೂ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ನಡೆಯಲಿದೆ.  ಇತ್ತೀಚೆಗೆ ಒಡಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರಿಣಿ ಸಭೆ ನಡೆದಿತ್ತು. ಈ ವೇಳೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಯಡಿಯೂರಪ್ಪ, ಮುಖಂಡರಾದ ಆರ್.ಅಶೋಕ್, ಜಗದೀಶ್‍ಶೆಟ್ಟರ್, ಪ್ರಹ್ಲಾದ್ ಜೋಷಿ, ಶ್ರೀರಾಮುಲು ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಈ ವೇಳೆ ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಹಾಗೂ ಸಂಘಟನೆ ಕುರಿತಂತೆ ಮಾಹಿತಿ ಪಡೆದ ಅಮಿತ್ ಷಾ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿ ಉಪಚುನಾವಣೆಯ ಫಲಿತಾಂಶದ ಬಗ್ಗೆ ತುಸು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದಾಗಲೂ ಪಕ್ಷದ ಸೋಲಿಗೆ ಕಾರಣ ಏನೆಂಬುದನ್ನು ರಾಜ್ಯ ನಾಯಕರಿಂದ ಪಡೆದರು. ಈ ಸೋಲಿನಿಂದ ಧೃತಿಗೆಡದೆ ಆತ್ಮಾವಲೋಕನ ಸಭೆ ನಡೆಸಿ ಪಕ್ಷದ ಸಂಘಟನೆಯತ್ತ ಚಿತ್ತ ಹರಿಸಬೇಕೆಂದು ಸೂಚನೆ ನೀಡಿದರು.  ಈ ಹಿನ್ನೆಲೆಯಲ್ಲಿ ವರಿಷ್ಠರ ಸೂಚನೆಯಂತೆ ಯಡಿಯೂರಪ್ಪ 23 ರಂದು ಸಭೆ ನಡೆಸಲಿದ್ದು, ಬಳಿಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಧೃತಿಗೆಡಬೇಡಿ:

ಉಪಚುನಾವಣೆಯಲ್ಲಿ ಪಕ್ಷ ಸೋಲು ಕಂಡರೂ ಕೇಂದ್ರ ವರಿಷ್ಠರು ರಾಜ್ಯ ನಾಯಕರಿಗೆ ಆತ್ಮವಿಶ್ವಾಸ ತುಂಬಿದ್ದಾರೆ. ಕರ್ನಾಟಕದಲ್ಲಿ 2018ರ ಏಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಗುಜರಾತ್ ಕಡೆ ಗಮನಹರಿಸಲಿದ್ದು, ತದನಂತರವೇ ಕರ್ನಾಟಕದ ಕಡೆ ಚಿತ್ತ ಹರಿಸಲಿದ್ದೇವೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಅಮಿತ್ ಷಾ ಅವರ ತವರು ರಾಜ್ಯದಲ್ಲೇ ಚುನಾವಣೆ ನಡೆಯುತ್ತಿರುವುದರಿಂದ ಇದನ್ನು ಪಕ್ಷ ಸವಾಲಾಗಿ ಸ್ವೀಕರಿಸಿದೆ. ಇಲ್ಲಿ ಗೆದ್ದರೆ ಕೇಂದ್ರ ಸರ್ಕಾರದ ಸಾಧನೆಗಳಿಗೆ ಜನಮನ್ನಣೆ ಇದೆ ಎಂಬುದು ಸಾಬೀತಾಗುತ್ತದೆ.

ಉತ್ತರ ಪ್ರದೇಶ, ಉತ್ತರಾಖಂಡ್‍ನಲ್ಲಿ ನಾವು ಗೆದ್ದ ನಂತರ ಗುಜರಾತ್‍ನಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾವುದೇ ಕಾರಣಕ್ಕೂ ಇಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಂತೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ವಿಶೇಷ ಕಾರ್ಯತಂತ್ರ ರೂಪಿಸಬೇಕಾಗಿದೆ.  ಗುಜರಾತ್ ಗೆದ್ದರೆ ರಾಷ್ಟ್ರೀಯ ನಾಯಕರು ಕರ್ನಾಟಕದತ್ತ ಗಮನಹರಿಸಲಿದ್ದಾರೆ. ಅಲ್ಲಿಯವರೆಗೂ ಪಕ್ಷದ ಸಂಘಟನೆ ರಾಜ್ಯಸರ್ಕಾರದ ವೈಫಲ್ಯಗಳ ವಿರುದ್ದ ಹೋರಾಟ ನಡೆಸಬೇಕೆಂದು ಅರುಣ್‍ಜೇಟ್ಲಿ ಸೂಚಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin