ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ
ಗುಡಿಬಂಡೆ, ಏ.18- ತೀವ್ರ ಬರಗಾಲದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಮೀನಾ ಮೇಷ ಎಣಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ( ಪುಟ್ಟಣ್ಣಯ್ಯ ಬಣ) ಸದಸ್ಯರು ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಹೆಚ್.ಪಿ. ರಾಮನಾಥ್, ದೇಶಕ್ಕೆ ಅನ್ನ ನೀಡುವ ರೈತ ಇಂದು ಬರಗಾಲದ ಪರಿಣಾಮ ಹಸಿವಿನಿಂದ ಪರದಾಡುವ ಪರಿಸ್ಥಿತಿಗೆ ತಲುಪಿದ್ದಾನೆ. ಬೆಳೆ ಬೆಳೆಯಲು ಭೂಮಿಯಿದ್ದರೂ ಮಳೆಯಿಲ್ಲದೆ ಆಕಾಶದ ಕಡೆ ದೀನನಾಗಿ ನೋಡುವಂತಾಗಿದೆ. ಜಾನುವಾರುಗಳಿಗೆ ಮೇವು ನೀರಿಲ್ಲದೆ ಕಸಾಯಿ ಖಾನೆಗಳಿಗೆ ನೀಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ದುಸ್ಥಿತಿಯಲ್ಲಿ ಅಲ್ಪ ಸ್ವಲ್ಪ ನೀರಾವರಿ ಸೌಲಭ್ಯವುಳ್ಳ ರೈತರು ಬೆಳೆ ಬೆಳೆದು ಮಾರುಕಟ್ಟೆಗೆ ತಂದರೆ ಅಲ್ಲಿ ವ್ಯಾಪಾರಸ್ಥರ ಕಪಿಮುಷ್ಟಿಯಲ್ಲಿ ಸಿಲುಕಿ ಸರಿಯಾದ ಬೆಲೆ ಸಿಗುತ್ತಿಲ್ಲ. ಇವೆಲ್ಲಾ ಸಮಸ್ಯೆಗಳ ನಡುವೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಗಳಿಂದ ಕೃಷಿಗಾಗಿ ರೈತರು ಪಡೆದಿರುವ ಸಾಲ ಪಾವತಿಸಲು ಬ್ಯಾಂಕ್ ಅಧಿಕಾರಿಗಳು ನೋಟೀಸ್ ನೀಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರು.ಇತ್ತ ರೈತರ ಸಾಲ ಮನ್ನಾ ಮಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತ ರೈತರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಉದಾಸೀನ ತೋರುತ್ತಿವೆ.
ರೈತ ಸಂಘದ ಹಲವಾರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದೆ. ಸರ್ಕಾರದ ಈ ಧೋರಣೆ ವಿರುದ್ಧ ಮುಂದಿ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಣ್ಣ ಮಾತನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.60 ರಷ್ಟಿರುವ ರೈತರು ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಸಮಸ್ಯೆಗಳು ಪರಿಹಾರವಾಗುತ್ತವೆ. ರಾಜಕೀಯ ವ್ಯಕ್ತಿಗಳು ರೈತರಲ್ಲಿನ ಒಗ್ಗಟನ್ನು ಹಾಳು ಮಾಡುತ್ತಿರುವ ಕಾರಣ ರೈತರ ಏಳ್ಗೆಗೆ ಧಕ್ಕೆಯಾಗಿದೆ. ಆದ್ದರಿಂದ ರೈತರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
ಸರ್ಕಾರ ರೈತರ ಬಹುದಿನದ ಬೇಡಿಕೆಗಳಾದ ಸಾಲ ಮನ್ನಾ,ಶಾಶ್ವತ ನೀರಾವರಿ ಯೋಜನೆ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ,ಬೆಂಬಲ ಬೆಲೆ, ಸಮರ್ಪಕ ವಿದ್ಯುತ್ ಪೂರೈಕೆ, ಕೃಷಿ ಯೋಜನೆಗಳ ಸಮರ್ಪಕ ಜಾರಿ ಮುಂತಾದುವನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.ಈ ವೇಳೆ ತಹಶೀಲ್ದಾರರಿಗೆ ಪ್ರತಿಭಟನಾಕಾರರು ಮನವಿ ಪತ್ರ ಅರ್ಪಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವೇಣು,ತಾಲೂಕು ಕಾರ್ಯದರ್ಶಿ ನಂದೀಶ್, ಸದಸ್ಯರಾದ ಚೌಡರೆಡ್ಡಿ,ರವಿ,ನಾಗೇಂದ್ರರೆಡ್ಡಿ, ರಾಜಪ್ಪ, ವೆಂಕಟಶಿವಾರೆಡ್ಡಿ, ಲವಕುಮಾರ್, ಗಂಗಿರೆಡ್ಡಿ, ಬಲರಾಮಪ್ಪ, ಶಂಕರರೆಡ್ಡಿ, ರಾಮಿರೆಡ್ಡಿ,ಶ್ರೀನಿವಾಸ್, ನಂಜಪ್ಪ, ಆಶ್ವತ್ಥಪ್ಪ ಇದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS