ಅವಧಿಗೆ ಮೊದಲೇ ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶ ಪಡೆಯಲು ಮುಂದಾದ ಸಿದ್ದು ಸರ್ಕಾರ..?

ಈ ಸುದ್ದಿಯನ್ನು ಶೇರ್ ಮಾಡಿ

siddaramaiah-Time

ಬೆಂಗಳೂರು, ಏ.19- ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಗೆಲುವಿನಿಂದ ಬೀಗುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶ ಪಡೆಯಲು ಮುಂದಾಗಿದೆ. ಆಡಳಿತಾರೂಢ ಪಕ್ಷಕ್ಕೆ ವಿರೋಧಿ ಅಲೆ  ಇಲ್ಲ ಎಂಬುದು ಉಪಚುನಾವಣೆಯಿಂದ ಸಾಬೀತಾಗಿರುವ ಕಾರಣ ಡಿಸೆಂಬರ್ ತಿಂಗಳಿನಲ್ಲಿ ವಿಧಾನಸಭೆ ವಿಸರ್ಜಿಸಿ ಮತ್ತೆ ಅಧಿಕಾರ ಹಿಡಿಯುವ ಉಮೇದಿನಲ್ಲಿದೆ. ನರೇಂದ್ರ ಮೋದಿ-ಅಮಿತ್ ಶಾ ಜೋಡಿಯ ಅಲೆಯನ್ನೇ ನಂಬಿಕೊಂಡು ಕೂತಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಕಾಂಗ್ರೆಸ್ ಈ ರಣತಂತ್ರ ರೂಪಿಸಿದೆ ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಮತ್ತೊಂದೆಡೆ ಹೈಕಮಾಂಡ್ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಿದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತ್ರ ಅವಧಿಗೂ ಮುನ್ನವೆ ಅಂದರೆ ಆರು ತಿಂಗಳು ಮುಂಚಿತವಾಗಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ ಕೈ ಸುಟ್ಟುಕೊಂಡಿದ್ದರು.
2004ರಲ್ಲಿ ರಾಜ್ಯದಲ್ಲಿ ಆವರಿಸಿದ ಬರಗಾಲ ಮತ್ತು ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಪುನಃ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಉಪಚುನಾವಣೆ ಗೆಲುವಿನಿಂದ ಭಾರೀ ಹುಮ್ಮಸ್ಸಿನಲ್ಲಿದ್ದಾರೆ. ಹೀಗಾಗಿ ಅಕ್ಟೋಬರ್ ವೇಳೆಗೆ ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶ ಪಡೆಯುವುದು ಅವರ ಲೆಕ್ಕಾಚಾರ.

2018ರ ಮೇ 13ರವರೆಗೆ ಕಾಂಗ್ರೆಸ್ ಸರ್ಕಾರದ ಅವಧಿ ಇದೆ. ಮೂಲಗಳ ಪ್ರಕಾರ, ಮಾರ್ಚ್-ಏಪ್ರಿಲ್ ತಿಂಗಳ ಮಧ್ಯದಲ್ಲಿ ಚುನಾವಣೆ ನಡೆಸಲು ಆಯೋಗ ಲೆಕ್ಕಾಚಾರ ಹಾಕಿದೆ. ಈಗ ಉಪಚುನಾವಣೆ ಗೆಲುವು ಕಾಂಗ್ರೆಸ್ ಪಕ್ಷದ ಉತ್ಸಾಹವನ್ನು ಇಮ್ಮಡಿಗೊಳಿಸಿರುವ ಕಾರಣ ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ಅವರ ಆಲೋಚನೆಯಾಗಿದೆ.

ಯಾಕೀ ಲೆಕ್ಕಾಚಾರ:

ಅವಧಿಗೂ ಮುನ್ನ ಚುನಾವಣೆಗೆ ಹೋಗಲು ರಾಜ್ಯ ಕಾಂಗ್ರೆಸ್ ನಾಯಕರಿಗೂ ಸುತರಾಂ ಇಷ್ಟವಿಲ್ಲ. ಆದರೆ ಮುಂದೆ ಆಡಳಿತವಿರೋಧಿ ಅಲೆಯ ಜೊತೆಗೆ ಮೋದಿ ಅಲೆಯಲ್ಲಿ ಪಕ್ಷ ಕೊಚ್ಚಿಹೋಗಬಹುದೆಂಬ ಆತಂಕ ಕಾಡುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ್‍ನಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ ರಾಜ್ಯದಲ್ಲೂ ಮೋದಿ ಆಟ ನಡೆಯುತ್ತದೆ ಎಂದು ಮನಸ್ಸಿನಲ್ಲಿ ಮಂಡಕ್ಕಿ ಮೇಯುತ್ತಿದೆ.  ಇದಕ್ಕೆ ವ್ಯತಿರಿಕ್ತವಾಗಿ ಎರಡು ಉಪಚುನಾವಣೆಗಳನ್ನು ಗೆದ್ದಿರುವ ಕಾಂಗ್ರೆಸ್ ಜನರ ನಾಡಿಮಿಡಿತ ಕಾಂಗ್ರೆಸ್ ಕಡೆಗಿದೆ ಎಂಬುದನ್ನು ಅರಿತು ಡಿಸೆಂಬರ್‍ನಲ್ಲಿ ಚುನಾವಣೆ ನಡೆಸಲು ತಂತ್ರ ರೂಪಿಸಿದೆ.

ಈ ವೇಳೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಟೇಲ್ ಸಮುದಾಯದ ವಿರೋಧ ಕಟ್ಟಿಕೊಂಡಿರುವ ಬಿಜೆಪಿ ಶತಾಯಗತಾಯ ಮೋದಿ ತವರು ರಾಜ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.  ಈಗಾಗಲೇ ಅಮಿತ್ ಷಾ ಅನೇಕ ಸಭೆ, ಸಮಾರಂಭಗಳನ್ನು ನಡೆಸಿದ್ದು, ಪಕ್ಷದ ಗೆಲುವಿಗೆ ತಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದಾರೆ.
ಮೋದಿ ಗುಜರಾತ್ ಕಡೆ ಹೆಚ್ಚು ಗಮನ ಕೊಟ್ಟಷ್ಟು ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದ್ದು, ಅದರ ಲಾಭ ಕಾಂಗ್ರೆಸ್‍ಗೆ ಆಗಲಿದೆ ಎಂಬುದು ಕೈ ನಾಯಕರ ಆಲೋಚನೆ.
ಹೆಚ್ಚೆಂದರೆ ಕರ್ನಾಟಕದಲ್ಲಿ 8 ರಿಂದ 10 ಸಭೆಗಳನ್ನು ನಡೆಸಬಹುದು. ಗುಜರಾತ್‍ನಲ್ಲಿ ಹೆಚ್ಚು ಕೇಂದ್ರೀಕರಿಸಿದರೆ ಅವರ ಅಲೆ ಇಲ್ಲಿ ನಡೆಯುವುದಿಲ್ಲ. ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಹೋದರೆ ಮತದಾರ ಕೈಹಿಡಿಯುತ್ತಾನೆ ಎಂಬ ಆತ್ಮವಿಶ್ವಾಸ ಕಾಂಗ್ರೆಸ್‍ನಲ್ಲಿದೆ.

ಸಿಎಂ ಮೇಲೆ ಒತ್ತಡ:

ಕೆಲ ಸಚಿವರು ಮತ್ತು ಶಾಸಕರು ಅವಧಿಗೂ ಮುನ್ನವೇ ಚುನಾವಣೆಗೆ ತೆರಳಲು ವಿಧಾನಸಭೆ ವಿಸರ್ಜಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಬಿಜೆಪಿ ಆಂತರಿಕ ಕಿತ್ತಾಟ, ಕಾಂಗ್ರೆಸ್‍ನ ಒಗ್ಗಟ್ಟು, ನೋಟು ಅಮಾನೀಕರಣ, ಕೇಂದ್ರ ಸರ್ಕಾರದ ವೈಫಲ್ಯಗಳು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತದೆ ಎಂಬ ಅದಮ್ಯ ವಿಶ್ವಾಸದ ಮೇಲೆ ಒತ್ತಡ ತಂತ್ರ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಮೂರು ದಶಕಗಳ ರಾಜ್ಯ ರಾಜಕಾರಣವನ್ನು ತಮ್ಮ ಅಂಗೈನಷ್ಟೆ ಅರಿತಿರುವ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ವಿಧಾನಸಭೆ ವಿಸರ್ಜಿಸುವ ಲೆಕ್ಕಾಚಾರದಲ್ಲಿಲ್ಲ. ಉಪಚುನಾವಣೆಯೇ ಬೇರೆ, ಸಾರ್ವತ್ರಿಕ ಚುನಾವಣೆಯೇ ಬೇರೆ.

ಉಪಚುನಾವಣೆಯಲ್ಲಿ ನಾವು ಸಚಿವರು, ಶಾಸಕರು, ಪಕ್ಷದ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಅವರವರ ಕ್ಷೇತ್ರಗಳನ್ನೇ ನಿಭಾಯಿಸಲು ಹೈರಾಣಾಗಿ ಹೋಗುತ್ತಾರೆ. ಇದು ಅಷ್ಟುಸ ಸುಲಭದ ಲೆಕ್ಕಾಚಾರವಲ್ಲ ಎಂಬ ಸಲಹೆಯನ್ನು ನೀಡಿದ್ದಾರೆ.

ವೀರಶೈವರಿಗೆ ಪಟ್ಟ:

ಬಿಜೆಪಿ ನೆಚ್ಚಿಕೊಂಡಿರುವ ವೀರಶೈವ ಸಮುದಾಯದ ಮತವನ್ನು ಛಿದ್ರ ಮಾಡಲು ಕಾರ್ಯತಂತ್ರ ರೂಪಿಸಿರುವ ಸಿದ್ದರಾಮಯ್ಯ ಇದೇ ಸಮುದಾಯದ ಮುಖಂಡರೊಬ್ಬರಿಗೆ ಕೆಪಿಸಿಸಿ ಪಟ್ಟ ಕಟ್ಟಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್‍ನ ಸಂಪ್ರದಾಯಿಕ ಮತಗಳಾದ ಅಹಿಂದ ಜೊತೆಗೆ, ವೀರಶೈವ, ಒಂದಿಷ್ಟು ಒಕ್ಕಲಿಗ ಮತಗಳನ್ನು ಸೆಳೆದರೆ ಕನಿಷ್ಠ 120 ರಿಂದ 130 ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳಬಹುದೆಂಬ ಲೆಕ್ಕಾಚಾರವನ್ನು ಸಿದ್ಧಪಡಿಸಿದ್ದಾರೆ.  ರಾಜಕಾರಣದಲ್ಲಿ ಕೆಲವು ಅಂತೆಕಂತೆಗಳನ್ನು ಸುಲಭವಾಗಿ ನಿರಾಕರಿಸುವಂತಿಲ್ಲ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin