ನನಗೆ ಯಾರ ಭಯವಿಲ್ಲ, ಅಣತಿ ಪಾಲಿಸಲ್ಲ : ಬಿಸ್‍ವೈಗೆ ಈಶ್ವರಪ್ಪ ಗುದ್ದು

ಈ ಸುದ್ದಿಯನ್ನು ಶೇರ್ ಮಾಡಿ

Eshwarapa-01
ಬೆಂಗಳೂರು, ಏ.20-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಸಡ್ಡು ಹೊಡೆದಿರುವ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇದೇ 27ರಂದು ಅತೃಪ್ತರ ಸಭೆ ಕರೆದಿದ್ದಾರೆ.ಇದು ಯಾರೊಬ್ಬರ ವಿರುದ್ಧ ನಡೆಸುತ್ತಿರುವ ಸಭೆ ಅಲ್ಲ. ಪಕ್ಷದ ಸಂಘಟನೆ ಹಾಗೂ ಪಕ್ಷ ವನ್ನು ಉಳಿಸಲು ನಿಷ್ಠಾವಂತ ಸಾವಿರಾರು ಕಾರ್ಯಕರ್ತರು ಕರೆದಿರುವ ಸಭೆ ಇದಾಗಿದೆ. ಅವರು ಕರೆದರೆ ಮಾತ್ರ ನಾನು ಹೋಗುತ್ತೇನೆಯೇ ಹೊರತು ಕರೆಯದಿದ್ದರೆ ಹೋಗುವುದಿಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದರು.ಖಾಸಗಿ ಹೊಟೇಲ್‍ನಲ್ಲಿ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮುಖಂಡರಾದ ಮುಕುಡಪ್ಪ, ವೆಂಕಟೇಶ್‍ಮೂರ್ತಿ ಮತ್ತಿತರರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ನೇರವಾಗಿಯೇ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ನಾನು ಯಾರಿಗೂ ಹೆದರುವುದಿಲ್ಲ ಹೇಳಬೇಕಾದದ್ದನ್ನು ನೇರವಾಗಿಯೇ ಹೇಳುತ್ತೇನೆ. ನನ್ನ ನಿಲುವೇನೆಂಬುದನ್ನು ಈಗಾಗಲೇ ವರಿಷ್ಠರಿಗೂ ತಿಳಿಸಿದ್ದೇನೆ. ಯಾರ ಅಣತಿಯಂತೆಯೂ ನಾನು ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ನಾಯಕತ್ವಕ್ಕೆ ಸವಾಲು ಎಸೆದರು.

ಪಕ್ಷದ ಏಳಿಗೆ ಹಾಗೂ ಸಂಘಟನೆಗಾಗಿ ಕರೆದಿರುವ ಸಭೆ ಇದಾಗಿದೆ. ಇವರ್ಯಾರೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ. ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಭೆ ಕರೆದಿದ್ದಾರೆ. ಸಂಘಟನೆ ಹಾಗೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡುವುದಾಗಿ ತಿಳಿಸಿದರು.

ಬಿಎಸ್‍ವೈ ವಿರುದ್ಧ ಅಸಮಾಧಾನ:

ತಮ್ಮ ಮಾತಿನಲ್ಲಿ ಯಡಿಯೂರಪ್ಪನವರ ಹೆಸರನ್ನು ಪ್ರಸ್ತಾಪಿಸದಿದ್ದರೂ ಈಶ್ವರಪ್ಪ ಪರೋಕ್ಷವಾಗಿ ಬಿಎಸ್‍ವೈ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.  ಕೇಂದ್ರ ವರಿಷ್ಠರ ಸೂಚನೆಯಂತೆ ಫೆಬ್ರವರಿ 10 ರಂದು ಸಭೆ ಕರೆದು ಪಕ್ಷದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕೆಂದು ಪಕ್ಷದ ನಿಷ್ಠರು ಒತ್ತಾಯ ಮಾಡಿದ್ದರು. ಇದಕ್ಕಾಗಿಯೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಲ್ವರು ಮುಖಂಡರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದ್ದರು. ಹಾಗಿದ್ದು ಇದುವರೆಗೆ ಒಂದೇ ಒಂದು ಸಭೆ ನಡೆದಿಲ್ಲ ಎಂದು ಅಸಮಾಧಾನ ಪಟ್ಟರು.ನಿಷ್ಠಾವಂತರಿಗೆ ಸೂಕ್ತ ಸ್ಥಾನಮಾನ ನೀಡುವುದರಿಂದ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಗೆ ಅಮಿತ್ ಷಾ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದು ವೇಳೆ ಅವರು ಬಂದರೆ ಪಕ್ಷದ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

ಸಂಗೊಳ್ಳಿರಾಯಣ್ಣ ಬ್ರಿಗೇಡ್ ಅನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಸಂಘಟನೆಯ ಪ್ರಮುಖರು ನಿರ್ಧರಿಸಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 25 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗುವುದು. ರಾಯಚೂರಿನಲ್ಲಿ ಮಹಿಳಾ ಸಮಾವೇಶ, ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದೇವೆ ಎಂದು ಈಶ್ವರಪ್ಪ ತಿಳಿಸಿದರು.ಸಿದ್ದು ಒತ್ತಡ ಹಾಕಲಿ: ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಹೊಸ ಮಸೂದೆವೊಂದನ್ನು ಜಾರಿ ಮಾಡಿದೆ. ಇದು ಲೋಕಸಭೆಯಲ್ಲಿ ಅಂಗೀಕೃತವಾಗಿದ್ದು, ರಾಜ್ಯಸಭೆಯಲ್ಲಿ ತಡೆಹಿಡಿಯಲಾಗಿದೆ.

ಪ್ರತಿಪಕ್ಷ ಕಾಂಗ್ರೆಸ್ ಕೆಲ ತಿದ್ದುಪಡಿ ಮಾಡಲು ಜಂಟಿ ಸಲಹಾ ಸಮಿತಿಗೆ ನೀಡಬೇಕೆಂದು ಒತ್ತಾಯಿಸಿ ತಡೆಹಿಡಿದಿದೆ. ಅಹಿಂದಾ ವರ್ಗದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮಸೂದೆ ಅಂಗೀಕರಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಬೇಕು. ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯರ ಸಭೆ ಕರೆದು ಮಸೂದೆ ಅಂಗೀಕರಿಸಲು ಸಹಕರಿಸಬೇಕೆಂದು ಇದೇ ವೇಳೆ ಈಶ್ವರಪ್ಪ ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin