ಉಮಾಭಾರತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ಮಲ್ಲಿಕಾರ್ಜುನ್ ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

mallikarjun-kharge

ಕಲಬುರಗಿ, ಏ.20-ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಮರುಜೀವ ನೀಡಿರುವ ಹಿನ್ನೆಲೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಕೇಂದ್ರ ಸಚಿವೆ ಉಮಾಭಾರತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಮುಖಂಡರ ಮೇಲೆ ಆರೋಪ ಬಂದಾಗ ಬಿಜೆಪಿಯವರು ರಾಜೀನಾಮೆಗೆ ಒತ್ತಾಯಿಸಿದ್ದರು. ಇದೀಗ ಕೇಂದ್ರ ಸಚಿವರಾಗಿರುವ ಉಮಾಭಾರತಿ ಅವರನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



 

ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್‍ಮಲ್ಯ ಅವರನ್ನು ದೇಶಕ್ಕೆ ವಾಪಸ್ ಕರೆತಂದು ಅವರಿಂದ ಬರಬೇಕಾದ ಕೋಟಿ, ಕೋಟಿ ಹಣವನ್ನು ವಾಪಸ್ ಪಡೆದರೆ ಮಾತ್ರ ಅದು ಮೋದಿ ಸರ್ಕಾರದ ಸಾಧನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಅಧ್ಯಕ್ಷ ಸ್ಥಾನ ಖಾಲಿ ಇಲ್ಲ ಎಂದು ಈಗಾಗಲೇ ರಾಜ್ಯ ಉಸ್ತುವಾರಿ ದಿಗ್ವಿಜಯ್‍ಸಿಂಗ್ ಅವರು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಮುಂದೆ ಅಧ್ಯಕ್ಷಗಾದಿ ಯಾರಿಗೆ ಒಲಿಯಲಿದೆ ಎನ್ನುವುದನ್ನು ವರಿಷ್ಠರೆ ತೀರ್ಮಾನಿಸಲಿದ್ದಾರೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin