ರೈತರಿಗೆ ನೆರವಾಗಲು 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cloud-sowing

ಹಾಸನ,ಏ.24-ಸಕಾಲಕ್ಕೆ ಮಳೆಯಾಗದೆ ತೀವ್ರ ಬರಗಾಲಕ್ಕೆ ತುತ್ತಾಗಿರುವ ಹಿನ್ನಲೆಯಲ್ಲಿ ರೈತರಿಗೆ ನೆರವಾಗಲು ಮೋಡ ಬಿತ್ತನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ನಿಮಿತ್ತ ಮೂಲಭೂತ ಸೌಕರ್ಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಜೆಟ್‍ನಲ್ಲಿ ಮೋಡ ಬಿತ್ತನೆಗೆ 30 ಕೋಟಿ ಮೀಸಲಿಡಲಾಗಿದ್ದು, ಕೃಷಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮೋಡ ಬಿತ್ತನೆ ಕಾರ್ಯ ಶೀಘ್ರದಲ್ಲಿ ಆರಂಭವಾಗಲಿದೆ ಎಂದರು.ರೈತರ ಸಾಲಮನ್ನಾ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರೈತರ ಸಾಲಮನ್ನಾ ಬಗ್ಗೆ ನಮಗೆ ವಿರೋಧವಿಲ್ಲ. ಶೇ.100ರಷ್ಟು ಸಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಶೇ.78ರಷ್ಟು ಹಾಗೂ ರಾಜ್ಯ ಸರ್ಕಾರ ವ್ಯಾಪ್ತಿಗೆ ಬರುವ ಸಹಕಾರಿ ಬ್ಯಾಂಕ್‍ಗಳಲ್ಲಿ ಶೇ.22ರಷ್ಟು ರೈತ ಸಾಲವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಾಲ ಮನ್ನಾ ಮಾಡಬೇಕು. ಆದರೆ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

ಮಾದರಿ ಸಿಎಂ ಆಗುವುದಕ್ಕಿಂತ ರೈತರ ಕಷ್ಟ ಪರಿಹಾರವಾಗಬೇಕು. ಅದಕ್ಕಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕುರಿತು ನಾವು ಕ್ರಮಕೈಗೊಳ್ಳುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ಕುರಿತು ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ಹೈಕಮಾಂಡ್‍ಗೆ ಬಿಟ್ಟಿದ್ದು. ಹೈಕಮಾಂಡ್ ಯಾರನ್ನು ಸೂಚಿಸುತ್ತಾರೋ ಅವರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಹಣ ಬಲ ಕಾರಣ ಎಂದು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜನರ ಪ್ರೀತಿ ವಿಶ್ವಾಸ ಪಕ್ಷದ ಮೇಲಿರುವುದರಿಂದ ಗೆದ್ದಿದ್ದೇವೆ. ಇದಕ್ಕೆ ಪ್ರತ್ಯೇಕ ವ್ಯಾಖ್ಯಾನ ನೀಡುವುದು ಬೇಡ ಎಂದರು.   ಕಾಂಗ್ರೆಸ್ ಹಿರಿಯ ಮುಖಂಡ ಎಚ್.ವಿಶ್ವನಾಥ್ ಅವರು ಜೆಡಿಎಸ್‍ಗೆ ಸೇರುವುದು ನನಗೆ ಗೊತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ:

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿಸ್ತರಣೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.  ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಆದರೆ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳಲು ಇದು ಒಂದು ವೇದಿಕೆಯಾಗಿತ್ತು ಎಂದು ಅವರು ಹೇಳಿದರು.

Facebook Comments

Sri Raghav

Admin