ಯೋಧರ ಬಲಿದಾನ ನಿರರ್ಥಕವಾಗದು, ನಕ್ಸಲರ ಹುಟ್ಟಡಗಿಸುತ್ತೇವೆ : ಪ್ರಧಾನಿ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

Modi-Angry--01

ನವದೆಹಲಿ, ಏ.25-ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ಕಾಲಾಪತ್ಥರ್ ಎಂಬಲ್ಲಿ ನಕ್ಸಲೀಯರ ಕ್ರೌರ್ಯಕ್ಕೆ 26 ಯೋಧರು ಬಲಿಯಾಗಿರುವ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ವ್ಯಾಕುಲಗೊಂಡಿದ್ದಾರೆ. ನಕ್ಸಲರ ಈ ಕೃತ್ಯವನ್ನು ಅತ್ಯಂತ ನೀಚತನ ಮತ್ತು ಹೇಡಿತನದ್ದು ಎಂದು ಗುಡುಗಿರುವ ಅವರು, ಹುತಾತ್ಮ ಯೋಧರ ಧೈರ್ಯ, ಸಾಹಸ ಮತ್ತು ತ್ಯಾಗವು ನಿರರ್ಥಕವಾಗದು. ವೀರಯೋಧರ ಮಾರಣಹೋಮ ನಡೆಸಿರುವ ಮಾವೋವಾದಿ ನಕ್ಸಲರ ಹುಟ್ಟಡಗಿಸುತ್ತೇವೆ ಎಂದು ಘರ್ಜಿಸಿದ್ದಾರೆ. ಈ ಮೂಲಕ ನಕ್ಸಲ್ ನೆಲೆಗಳ ಮೇಲೆ ಸರ್ಜಿಕಲ್ ಸ್ಟೈಕ್‍ನಂಥ ಕಾರ್ಯಾಚರಣೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.ಈ ನರಮೇಧವನ್ನು ಖಂಡಿಸಿರುವ ಪ್ರಧಾನಿ, ಸಿಆರ್‍ಪಿಎಫ್ ಯೋಧರ ಶೌರ್ಯದ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ತ್ಯಾಗ ಎಂದೂ ನಿಷ್ಪ್ರಯೋಜಕವಾಗಲು ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.  ಪಾಕಿಸ್ತಾನ ಉಗ್ರರು ಉರಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 21 ಯೋಧರನ್ನು ಕೊಂದು ಹಾಕಿ ಅಟ್ಟಹಾಸ ಮೆರೆದಿದ್ದಾಗಲೂ ಪ್ರಧಾನಿ, ಹುತಾತ್ಮ ಸೈನಿಕರ ತ್ಯಾಗ ನಿರರ್ಥಕವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಭಯೋತ್ಪಾದಕರ ನೆಲೆ ಮೇಲೆ ಭಾರತೀಯ ಕಮ್ಯಾಂಡೋಗಳು ದಾಳಿ ನಡೆಸಿ ಉಗ್ರರನ್ನು ಹೊಸಕಿ ಹಾಕಿದ್ದರು.

ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯಪ್ರದೇಶವು ನಕ್ಸಲರ ಕಾರಸ್ಥಾನವಾಗಿದ್ದು, ಬಂಡುಕೋರರ ನಿಗ್ರಹಕ್ಕೆ ಬಿರುಸಿನ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.   ನಕ್ಸಲ್ ದಾಳಿಯಲ್ಲಿ ಮೃತಪಟ್ಟ 26 ಯೋಧರ ಪಾರ್ಥಿವ ಶರೀರಗಳನ್ನು ಇಂದು ಬೆಳಗ್ಗೆ ಛತ್ತೀಸ್‍ಗಢ ರಾಜಧಾನಿ ರಾಯ್‍ಪುರಕ್ಕೆ ತರಲಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ರಮಣ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಯೋಧರ ಗೌರವಾರ್ಥ 21 ಕುಶಾಲತೋಪುಗಳನ್ನು ಹಾರಿಸಲಾಯಿತು.

ನಂತರ ಹುತಾತ್ಮ ಯೋಧರ ಕಳೆಬರಗಳನ್ನು ಅವರ ಹುಟ್ಟೂರಿಗೆ ರವಾನಿಸಲಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಛತ್ತೀಸ್‍ಗಢದ ದಕ್ಷಿಣ ಬಸ್ತರ್ ಪ್ರಾಂತ್ಯದ ಸುಕ್ಮಾ ಜಿಲ್ಲೆ ಕಾಲಾಪತ್ಥರ್ ಬಳಿ ನಿನ್ನೆ ಅಪರಾಹ್ನ ಸುಮಾರು 300 ನಕ್ಸಲರು ಸಿಆರ್‍ಪಿಎಫ್‍ನ ಗಸ್ತು ಪಡೆಯಲ್ಲಿದ್ದ ಸುಮಾರು 99 ಯೋಧರ ಮೇಲೆ ದಾಳಿ ನಡೆಸಿದರು. ಈ ಹತ್ಯಾಕಾಂಡದಲ್ಲಿ 26 ಸೈನಿಕರು ಮೃತಪಟ್ಟಿದ್ದು, ಎಂದು ಯೋಧರು ನಾಪತ್ತೆಯಾಗಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.  ಸಿಆರ್‍ಪಿಎಫ್ ಪಡೆ ನಡೆಸಿದ ಮರುದಾಳಿಯಲ್ಲಿ ಸುಮಾರು 15 ನಕ್ಸಲರು ಮೃತಪಟ್ಟಿರುವ ಸಾಧ್ಯತೆ ಇದೆ.

ರಾಜನಾಥ್ ಸಭೆ :

ನಕ್ಸಲರ ಕೌರ್ಯವನ್ನು ಖಂಡಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್, ಇದು ವ್ಯವಸ್ಥಿತಿತ ಹತ್ಯೆಯಾಗಿದೆ. ಅಮಾಯಕ ಬುಡಕಟ್ಟು ಜನರನ್ನು ತಮ್ಮ ರಕ್ಷಣೆಗೆ ನಕ್ಸಲರು ನಿಯೋಜಿಸಿಕೊಂಡಿದ್ಧಾರೆ. ಈ ಬಂಡುಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳಿಗೆ ಅವರು ಸಾಂತ್ವನ ಸೂಚಿಸಿದ್ದಾರೆ. ಈ ಮಧ್ಯೆ, ರಾಯಪುರದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿದ ರಾಜನಾಥ್ ಸಿಂಗ್, ನಕ್ಸಲ್ ನಿಗ್ರಹಕ್ಕೆ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಕೆಲವು ನಿರ್ದಿಷ್ಟ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯೋಧರ ಮೃತ್ಯುಕೂಪ ಸುಕ್ಮಾ :

ಸುಕ್ಮಾ ಜಿಲ್ಲೆಯ ದಟ್ಟಡವಿ ನಕ್ಸಲರ ಅಡುಗುತಾಣವಾಗಿದ್ದು, ಅಗಾಗ ಪೊಲೀಸರು ಮತ್ತು ಯೋಧರ ಮೇಲೆ ಹಠಾತ್ ದಾಳಿ ನಡೆಸಿ ಕೊಂದು ಹಾಕುತ್ತಿದ್ದಾರೆ. ಮಾ.10ರಂದು ಸುಕ್ಮಾ ಜಿಲ್ಲೆಯ ಭೆಜ್ಜಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಾಚೇರು ಗ್ರಾಮದಲ್ಲಿ ಮಾವೋವಾದಿಗಳು 12 ಸಿಆರ್‍ಪಿಎಫ್ ಯೋದರನ್ನು ಕೊಂದು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ರೇಡಿಯೋ ಸೆಟ್‍ಗಳನ್ನು ದೋಚಿ ಪರಾರಿಯಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin