ಅವಧಿಗೆ ಮುನ್ನ ಚುನಾವಣೆ ನಡೆಯುತ್ತೆ ಎನ್ನಲು ಯಡಿಯೂರಪ್ಪ ಏನ್ ಚುನಾವಣಾ ಆಯುಕ್ತರಾ..? ಸಿದ್ದು ಗುದ್ದು

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Siddaramaiah

ಮೈಸೂರು, ಏ.26-ಅವಧಿಗೆ ಮುನ್ನ ಚುನಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ನಡೆಯುತ್ತಿದೆ ಎಂದು ಹೇಳಲು ಯಡಿಯೂರಪ್ಪ ಏನು ಚುನಾವಣಾ ಆಯುಕ್ತರೇ ಎಂದು ತಿರುಗೇಟು ನೀಡಿದ್ದಾರೆ.  ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆ ವಿಜಯೋತ್ಸವದ ನಿಮಿತ್ತ ಮತದಾರರಿಗೆ ಅಭಿನಂದನೆ ಸಲ್ಲಿಸಲು ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾದೇಶ ಇರುವವರೆಗೂ ನಾವು ಅಧಿಕಾರದಲ್ಲಿರುತ್ತೇವೆ. ಯಾವುದೇ ಕಾರಣಕ್ಕೂ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ. ಮೇ 2018ರವರೆಗೆ ನಮಗೆ ಜನ ಅಧಿಕಾರ ನೀಡಿದ್ದಾರೆ. ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತೇವೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಹಿಂದೆ ಯಡಿಯೂರಪ್ಪ ವಾಣಿಜ್ಯ ತೆರಿಗೆ ಆಯುಕ್ತರಂತೆ ವರ್ತಿಸುತ್ತಿದ್ದರು. ಈಗ ಚುನಾವಣಾ ಆಯುಕ್ತರಾಗಲು ಹೊರಟಿದ್ದಾರೆ. ಅವರೊಬ್ಬ ಮಹಾನ್ ಸುಳ್ಳುಗಾರರು.ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ನಮ್ಮ ಸಂಪುಟದ ಮೂವರು ಸಚಿವರು ರಾಜೀನಾಮೆ ನೀಡುತ್ತಾರೆ, ಜೈಲಿಗೆ ಹೋಗುತ್ತಾರೆ ಎಂದೆಲ್ಲಾ ಯಡಿಯೂರಪ್ಪ ಹೇಳಿದ್ದರು. ಅದು ನಿಜವಾಯಿತೇ? ಯಾರು ಜೈಲಿಗೆ ಹೋಗಿದ್ದರು ಎಂಬುದು ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ಅವರು ಹೇಳಿದ್ದು ಒಂದೂ ಆಗಿಲ್ಲ. ಅವರ ಮಾತಿಗೆ ಅಷ್ಟು ಮನ್ನಣೆ ಕೊಡುವ ಅಗತ್ಯವೂ ಇಲ್ಲ ಎಂದರು.

ಚುನಾವಣಾ ಸಂದರ್ಭದಲ್ಲಿ ನಾವು ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.  ಗೋಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದು ಹಾಲು ಕೊಡುತ್ತವೆಯೋ ಅವುಗಳನ್ನು ವಧೆ ಮಾಡಬಾರದೆಂಬ ಆದೇಶವಿದೆ. ಅದನ್ನು ಪಾಲಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಪಕ್ಷಕ್ಕೆ ಹೆದರಿ ನಾವು ಸ್ಟೀಲ್ ಬ್ರಿಡ್ಜ್ ವಿಚಾರ ಕೈಬಿಡಲಿಲ್ಲ. ಸಾರ್ವಜನಿಕರು ಹಾಗೂ ನ್ಯಾಷನಲ್ ಗ್ರೀನ್ ಟ್ರಿಬುನಲ್ ವಿರೋಧ ವ್ಯಕ್ತಪಡಿಸಿದ್ದರಿಂದ ಕೈಬಿಡಲಾಯಿತು ಎಂದು ಹೇಳಿದರು.

ಹಿರಿಯ ಮುಖಂಡ ವಿಶ್ವನಾಥ್ ಪಕ್ಷ ಬಿಟ್ಟು ಹೋಗಿಲ್ಲ. ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ ಎಂದು ಅವರೇ ಹೇಳಿದ್ದಾರೆ ಎಂದು ತಿಳಿಸಿದರು.  ಪ್ರಧಾನಿಯವರನ್ನು ಭೇಟಿಯಾಗಿರುವ ಬಗ್ಗೆ ಮಾತನಾಡುತ್ತಾ, ನಾವು ರಾಜ್ಯಕ್ಕೆ ಅನುದಾನ ನೀಡುವ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಬೇರೆ ರಾಜ್ಯಗಳಿಗೆ ನೀಡಿದಷ್ಟು ಹೆಚ್ಚಿನ ಪರಿಹಾರ ನಮ್ಮ ರಾಜ್ಯಕ್ಕೆ ನೀಡಿಲ್ಲ. ನಾವು 4702 ಕೋಟಿ ರೂ. ಕೋರಿದ್ದೆವು, ಆದರೆ 1686 ಕೋಟಿ ರೂ. ಮಾತ್ರ ನೀಡಲಾಗಿದೆ. ಈ ಹಣ ಸಾಕಾಗುವುದಿಲ್ಲ ಎಂದು ಪ್ರಧಾನಿಯವರ ಗಮನ ಸೆಳೆದಿರುವುದಾಗಿ ಹೇಳಿದರು.

ನಾವು ದುಬೈಗೆ ಹೋಗುತ್ತಿರುವುದು ಮೋಜು-ಮಸ್ತಿಗಾಗಿ ಅಲ್ಲ. ಗಾಲ್ಫ್‍ನಲ್ಲಿ ಎನ್‍ಆರ್‍ಐ ಪೋರಂನವರು ಆಯೋಜಿಸಿರುವ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin