ಖ್ಯಾತ ಬಾಲಿವುಡ್ ನಟ ವಿನೋದ್ ಖನ್ನಾ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Vinod-Khanna-Nomore
ಮುಂಬೈ, ಏ.27- ಹಿಂದಿ ಚಿತ್ರರಂಗದ ಹಿರಿಯ ನಟ-ನಿರ್ಮಾಪಕ ಮತ್ತು ಸಂಸದ ವಿನೋದ್ ಖನ್ನಾ (70) ಇನ್ನಿಲ್ಲ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಮುಂಬೈನ ಸರ್‍ಎಚ್‍ಎನ್ ರಿಲಾಯನ್ಸ್ ಫೌಂಡೇಷನ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಮೂವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಖನ್ನಾ ಅಗಲಿದ್ದಾರೆ.  ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಕೃಶರಾಗಿ ಪೇಲವ ವದನ ಹೊಂದಿದ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡು ಬಾಲಿವುಡ್ ತಾರೆಯರು ಮತ್ತು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆಗಲೇ ಮರಣಶಯ್ಯೆಯಲ್ಲಿದ್ದರು. ಮಾರ್ಚ್ 31ರಿಂದ ತೀವ್ರ ನಿರ್ಜಲೀಕರಣ ಸಮಸ್ಯೆಯಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 6ನೆ ಅಕ್ಟೋಬರ್, 1946ರಂದು ಪಾಕಿಸ್ತಾನ ಗಡಿ ಭಾಗ ಪೇಶಾವರ್‍ನಲ್ಲಿ ಪಂಜಾಬ್ ಕುಟುಂಬವೊಂದರಲ್ಲಿ ಜನಿಸಿದ್ದ ಅವರು, 1968ರಿಂದ 2013ರ ವರೆಗೆ 141 ಚಿತ್ರಗಳಲ್ಲಿ ನಟಿಸಿದ್ದಾರೆ.ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ಖಳನಾಯಕ ಮತ್ತು ಎರಡನೆ ನಾಯಕನ ಪಾತ್ರದಲ್ಲಿ ಮಿಂಚಿದರು. ಆರು ಅಡಿ ಎತ್ತರದ ಈ ಸ್ಫೂರದ್ರೂಪಿ ನಟನ ಪ್ರತಿಭೆ ಕಂಡು ಹಿಂದಿ ಚಿತ್ರರಂಗ ಅವರಿಗೆ ನಾಯಕ ನಟನಾಗುವ ಅವಕಾಶ ನೀಡಿತು.  ಮೇರಾ ಅಪ್ನೆ, ಮೇರಾ ಗಾಂವ್-ಮೇರಾ ದೇಶ್, ಗಡ್ಡರ್, ಜೈಲ್ ಯಾತ್ರಾ, ಇಮ್ತಿಯಾಸ್, ಇಂಕಾರ್, ಕುಚ್ಚೆಧಾಗೆ, ಅಮರ್-ಅಕ್ಬರ್-ಅಂಥೋನಿ, ರಾಜ್‍ಪಥ್, ಖುರ್ಬಾನಿ, ಕುದ್ರತ್, ದಯಾವಾನ್, ಸುರೈಯ, ಜುರ್ಮ್ ಮೊದಲಾದ ಹಿಟ್ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

1982ರಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಅವರು ಒಂದು ಹಂತದಲ್ಲಿ ಬಿಗ್‍ಬಿ ಅಮಿತಾಭ್ ಬಚ್ಚನ್ ಅವರಿಗೆ ಸವಾಲೊಡ್ಡಿ ಬೆರಗು ಮೂಡಿಸಿದ್ದರು. ಧರ್ಮೇಂದ್ರ, ರಾಜೇಶ್ ಖನ್ನಾ, ಶಮ್ಮಿ ಕಪೂರ್ ಪ್ರಖ್ಯಾತರಾಗಿದ್ದ ಕಾಲದಲ್ಲೂ ವಿನೋದ್ ಮುಂಚೂಣಿಯಲ್ಲಿದ್ದರು.  ಸಿನಿಮಾಗಳಲ್ಲಿನ ಶ್ರೇಷ್ಠ ನಟನೆಗಾಗಿ ಫಿಲ್ಮ್‍ಫೇರ್ ಪ್ರಶಸ್ತಿಗಳು, ಫಿಲ್ಮ್‍ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಕಲಾಕಾರ್ ಪ್ರಶಸ್ತಿ, ಸ್ಟಾರ್‍ಡಸ್ ಪ್ರಶಸ್ತಿ, ಜೀ ಸಿನಿ ಅವಾರ್ಡ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರ-ಗೌರವಗಳಿಗೆ ವಿನೋದ್ ಪಾತ್ರರಾಗಿದ್ದಾರೆ.

1997ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರು ಪಂಜಾಬ್‍ನ ಗುರುದಾಸ್‍ಪುರದಿಂದ ಸಂಸದರಾಗಿ ಚುನಾಯಿತರಾಗಿದ್ದರು. 1999ರಲ್ಲಿ ಇದೇ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಯಾದರು. 2002ರಲ್ಲಿ ಸಂಸ್ಕøತಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. 2004ರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅವರು ಪರಾಭವಗೊಂಡರು. ಮತ್ತೆ 2014ರ ಚುನಾವಣೆಯಲ್ಲಿ ಗುರುದಾಸ್‍ಪುರ ಕ್ಷೇತ್ರದಿಂದ ಮರು ಆಯ್ಕೆಯಾದರು.

ಗಣ್ಯರ ಕಂಬನಿ: ವಿನೋದ್ ಖನ್ನಾ ನಿಧನಕ್ಕೆ ರಾಜಕೀಯ ನಾಯಕರು, ಬಾಲಿವುಡ್ ತಾರೆಯರು ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS   

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin