ಟ್ರಾಫಿಕ್ ಪೊಲೀಸರ ಶರ್ಟ್ ಗುಂಡಿಗಳಲ್ಲಿ ಕ್ಯಾಮೆರಾ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

kr-pete

ಕೆ.ಆರ್‍.ಪುರ, ಏ.29- ಟ್ರಾಫಿಕ್ ಪೊಲೀಸರ ಶರ್ಟ್ ಗುಂಡಿಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಇದರಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ಕೆಆರ್ ಪುರದಲ್ಲಿ ನೂತನ ಟ್ರಾಫಿಕ್ ಪೊಲೀಸ್ ಠಾಣೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಂಚಾರಿ ಪೊಲೀಸರನ್ನು ಬೈದರೆ, ಸಾರ್ವಜನಿಕರ ಬಳಿ ಪೊಲೀಸರು ಅಸಭ್ಯವಾಗಿ ನಡೆದುಕೊಂಡರೆ ಅಥವಾ ಯಾವುದೇ ಅವ್ಯವಹಾರಗಳಿಗೆ ಇದರಿಂದ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಪೊಲೀಸರ ಶರ್ಟ್ ಬಟನ್‍ಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು ಈ ಕ್ಯಾಮೆರಾದಲ್ಲಿ ಎಲ್ಲವೂ ರೆಕಾರ್ಡ್ ಆಗುವುದರಿಂದ ಇಂತಹ ಸಮಸ್ಯೆಗಳು ತಲೆದೋರದು ಎಂದು ತಿಳಿಸಿದರು.

ಟ್ರಾಫಿಕ್ ಮ್ಯಾನೇಜ್‍ಮೆಂಟ್ ಕೇಂದ್ರ ತೆರೆದಿದ್ದು, ಇನ್ನು ಮುಂದೆ ನಗರದ ಯಾವುದೇ ಮೂಲೆಯಲ್ಲೂ ಸಿಗ್ನಲ್ ಜಂಪ್ ಅಥವಾ ನೋ ಪಾರ್ಕಿಂಗ್‍ನಲ್ಲಿ ವಾಹನ ನಿಲ್ಲಿಸಿದ್ದರೆ ಅದನ್ನು ಸೆಂಟರ್‍ನಲ್ಲೇ ಪರಿಶೀಲಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ಇದಕ್ಕೆ ಅಗತ್ಯವಿರುವ ಹೈ ಡೆಫ್‍ನೇಷನ್ ಕ್ಯಾಮೆರಾಗಳನ್ನು ನಗರಾದ್ಯಂತ ಅಳವಡಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ಟ್ರಾಫಿಕ್ ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ಮಹಿಳಾ ಸುರಕ್ಷಾ ಮೊಬೈಲ್ ಆ್ಯಪ್ ತೆರೆದಿದ್ದು, ಈ ಆ್ಯಪನ್ನು ಎಲ್ಲರೂ ಡೌನ್‍ಲೋಡ್ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ನಗರದ ಪೊಲೀಸರಿಗೆ ಹೊಸದಾಗಿ 300 ಕಾರುಗಳನ್ನು ನೀಡಲಾಗಿದೆ.ಅದರಲ್ಲಿ ಟ್ಯಾಬ್ಲೆಟ್ ಅಳವಡಿಸಲಾಗಿದ್ದು, ಮಹಿಳಾ ಸುರಕ್ಷಾ ಆ್ಯಪ್ ಹೊಂದಿರುವ ಮಹಿಳೆಯರು ಬಟನ್ ಪ್ರೆಸ್ ಮಾಡಿದರೆ 15 ಸೆಕೆಂಡ್‍ಗಳಲ್ಲಿ ಕಂಟ್ರೋಲ್ ರೂಂಗೆ ಮೆಸೇಜ್ ತಲುಪಿ ಮಹಿಳೆ ಇರುವ ಸ್ಟೇಷನ್‍ಗೆ ತಕ್ಷಣ ಮಾಹಿತಿ ನೀಡಲಾಗುತ್ತದೆ. ಕೂಡಲೇ ಮಹಿಳೆ ಇರುವ ಜಾಗಕ್ಕೆ ಪೊಲೀಸರು ತಲುಪಿ ಸಮಸ್ಯೆ ಬಗೆಹರಿಸುವರು ಎಂದು ಹೇಳಿದರು.ಜನಸ್ನೇಹಿ ಪೊಲೀಸ್ ಆಗಬೇಕೆಂಬ ಉದ್ದೇಶದಿಂದ ಹೊಸದೊಂದು ಪ್ರಯೋಗ ಆರಂಭಿಸಿದ್ದು, ಇದರಲ್ಲಿ ಒಂದು ಏರಿಯಾಗೆ ಒಬ್ಬೊಬ್ಬ ಪೊಲೀಸರಿಗೆ ಜವಾಬ್ದಾರಿ ವಹಿಸಲಾಗಿದ್ದು, ಆ ಪೊಲೀಸರು ಆಯಾ ಏರಿಯಾಗಳ ಸುಮಾರು 50 ಮಂದಿಯೊಂದಿಗೆ ಸಂಪರ್ಕವಿರಿಸಿಕೊಂಡು ದಿನನಿತ್ಯದ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುತ್ತಾರೆ. ಯಾರ ಮೇಲೆಯಾದರೂ ಸಂದೇಹ ವ್ಯಕ್ತವಾದರೆ ಅವರ ಮೇಲೆ ಆ ಪೊಲೀಸ್ ನಿಗಾ ಇಡುವರು. ಇಡೀ ದೇಶದಲ್ಲಿ ಇದನ್ನು ಮೊಟ್ಟ ಮೊದಲಬಾರಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದ್ದು, ಯಶಸ್ಸು ಕಾಣುವ ವಿಶ್ವಾಸವಿದೆ ಎಂದು ಹೇಳಿದರು.

ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಪೊಲೀಸ್ ಇಲಾಖೆ ಕಾರ್ಯಗಳು ವೇಗವಾಗಿ ನಡೆಯುವಂತೆ ನೋಡಿಕೊಂಡಿದ್ದೇನೆ. 8 ಕೋಟಿ ರೂ.ವೆಚ್ಚದಲ್ಲಿ ಕೆಆರ್‍ಪುರದಲ್ಲಿ ನಿರ್ಮಿಸುತ್ತಿರುವ ಸಂಚಾರಿ ಠಾಣೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. ಗುಣಮಟ್ಟದೊಂದಿಗೆ ಆದಷ್ಟು ಬೇಗ ಕಾಮಗಾರಿ ಮುಗಿಸಿಕೊಟ್ಟರೆ ಇಲ್ಲಿನ ಪೊಲೀಸ್ ವಸತಿ ಗೃಹಗಳ ಜೊತೆಯೇ ಈ ಠಾಣೆಯನ್ನೂ ಉದ್ಘಾಟನೆ ಮಾಡಲಾಗುವುದು ಎಂದು ಗುತ್ತಿಗೆದಾರರಿಗೆ ತಿಳಿಸಿದರು.  ಸಾರ್ವಜನಿಕರ ಹಿತ ಕಾಯುವ ಪೊಲೀಸರ ಹಿತ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದಲೇ ಕೆಆರ್‍ಪುರದಲ್ಲಿ 498 ಪೊಲೀಸ್ ವಸತಿ ಗೃಹಗಳು ನಿರ್ಮಾಣ ಹಂತದಲ್ಲಿದೆ ಎಂದರು.

ಬೆಂಗಳೂರು ನಗರದಲ್ಲಿ 1.20ಕೋಟಿ ಜನ ಸಂಖ್ಯೆ ಇದೆ. ಅದರಲ್ಲಿ 68 ಲಕ್ಷ ಮಂದಿ ವಾಹನಗಳೊಂದಿಗೆ ರಸ್ತೆಗೆ ಬರುತ್ತಿರುವುದರಿಂದ ದಿನ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚು ಬಸ್ ಹಾಗೂ ಟ್ರೈನ್‍ಗಳ ವ್ಯವಸ್ಥೆ ಕಲ್ಪಿಸಿ ಸಂಚಾರ ದಟ್ಟಣೆ ನಿಯಂತ್ರಿಸಲಾಗುವುದು ಎಂದರು.ಶಾಸಕ ಬೈರತಿ ಬಸವರಾಜ ಮಾತನಾಡಿ, ಕೆಆರ್‍ಪುರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಪೊಲೀಸರ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಬಾಂದವ್ಯ ರೂಪಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಸುರೇಶ್, ಹಟ್ಟಿ ಮತ್ತು ಚಿನ್ನದ ಗಣಿ ನಿರ್ದೇಶಕ ಸಂಪತ್‍ಕುಮಾರ್, ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್, ಮುಖಂಡರಾದ ಡಿ.ಕೆ.ಮೋಹನ್‍ಬಾಬು, ಎಲ್.ಮುನಿಸ್ವಾಮಿ, ಮುನೇಗೌಡ, ಇಟಾಚಿ ಮಂಜು, ಆಂಜಿನಪ್ಪ, ಉದಯ್‍ಕುಮಾರ್, ರವಿ, ಶಿವಪ್ಪ, ಡೀಸಲ್ ಮಂಜು, ತಿರುಮಲರೆಡ್ಡಿ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin