ಪುಟ್ಟಸ್ವಾಮಿ ಅವರನ್ನು ಪಕ್ಷದಿಂದ ದೂರವಿಡಲು ಈಶ್ವರಪ್ಪ ಬಣ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Puttaswamy--01

ಬೆಂಗಳೂರು, ಏ.30-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ದಿಕ್ಕು ತಪ್ಪಿಸುತ್ತಿರುವ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಈಶ್ವರಪ್ಪ ಬಣ ಒತ್ತಾಯಿಸಿದೆ.  ಇಂದು ಬಿಜೆಪಿ ಉಸ್ತುವಾರಿ ನಾಯಕ ಮುರಳೀಧರ್‍ರಾವ್‍ಅವರನ್ನು ಭೇಟಿ ಮಾಡಲಿರುವ ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಮೊದಲು ಪುಟ್ಟಸ್ವಾಮಿ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರವಿಡುವಂತೆ ಒತ್ತಾಯಿಸಲಿದ್ದಾರೆ.  ಯಡಿಯೂರಪ್ಪ ಅವರಿಗೆ ಪಕ್ಷ ಸಂಘಟನೆ ಬಗ್ಗೆ ಆಸಕ್ತಿ ಇದೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಪುಟ್ಟಸ್ವಾಮಿ ಅವರಂತಹ ಹಿಂಬಾಲಕರು ಪ್ರತಿಹಂತದಲ್ಲೂ ಯಡಿಯೂರಪ್ಪ ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. [ ಇದನ್ನೂ ಓದಿ :  ಬೆಂಬಲಿಗರಿಗೆ ಕೊಕ್ ನೀಡಿ ಯಡಿಯೂರಪ್ಪ-ಈಶ್ವರಪ್ಪ ಬಣಕ್ಕೆ ಬಿಸಿ ಮುಟ್ಟಿಸಿದ ಹೈಕಮಾಂಡ್ ]ವಿವಾದಕ್ಕೀಡಾಗಿರುವ ಕೆಲವು ಜಿಲ್ಲೆಗಳ ಅಧ್ಯಕ್ಷರು ಮತ್ತು ಮೋರ್ಚಾಗಳ ಪ್ರಮುಖರನ್ನು ಬದಲಾವಣೆ ಮಾಡಲು ಯಡಿಯೂರಪ್ಪ ಮುಂದಾಗಿದ್ದರು. ಆದರೆ ಅದಕ್ಕೆ ಪುಟ್ಟಸ್ವಾಮಿ ಹಾಗೂ ಇತರೆ ನಾಯಕರು ಅಡ್ಡಗಾಲು ಹಾಕಿದ್ದಾರೆ ಎಂದು ಈಶ್ವರಪ್ಪ ಬಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆಗ ಇನ್ನೊಂದು ಅವಧಿಗೆ ವಿಧಾನಪರಿಷತ್ ಸ್ಥಾನ ಗಿಟ್ಟಿಸಬೇಕು ಮತ್ತು ಕುರ್ಚಿಯನ್ನು ಭದ್ರ ಮಾಡಿಕೊಳ್ಳಬೇಕೆಂಬ ದುರಾಸೆಯಿಂದ ಪಕ್ಷದ ಪ್ರಮುಖ ವಿಷಯಗಳಲ್ಲಿ ಪುಟ್ಟಸ್ವಾಮಿ ಮೂಗು ತೂರಿಸುತ್ತಿದ್ದಾರೆ. ಮೊದಲು ಅವರು ನೇತೃತ್ವ ವಹಿಸಿರುವ ಹಿಂದುಳಿದ ವರ್ಗಗಳ ಮೋರ್ಚಾದ ಸಂಘಟನೆ ಎಷ್ಟರಮಟ್ಟಿಗೆ ಮಾಡಿದ್ದಾರೆ ಎಂಬುದನ್ನು ಹೇಳಲಿ. ಪಕ್ಷಕ್ಕಾಗಿ ಏನನ್ನೂ ಮಾಡದೆ ಕೇವಲ ಅಧಿಕಾರ ಅನುಭವಿಸುತ್ತಾ, ನಾಯಕರ ಹಿಂಬಾಲಕರಾಗಿ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹ ಸ್ವಾರ್ಥಿಗಳನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ಕಿತ್ತೊಗೆಯಿರಿ ಎಂದು ಈಶ್ವರಪ್ಪ ಬಣ ಪಟ್ಟು ಹಿಡಿದಿದೆ. [ಇದನ್ನೂ ಓದಿ :   ಬಿಜೆಪಿ ಅನಗತ್ಯ ಗೊಂದಲದ ಬಗ್ಗೆ ಜನರಲ್ಲಿ ಕ್ಷಮೆಯಾಚಿಸಿದ ಲಿಂಬಾವಳಿ ]

ಬಿಜೆಪಿ ನಿಷ್ಠಾವಂತರ ಹೆಸರಿನಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಸಮಾವೇಶ ನಡೆದ ನಂತರ ಪಕ್ಷದ ಒಳಜಗಳ ತಾರಕಕ್ಕೇರಿದೆ. ಪುಟ್ಟಸ್ವಾಮಿ ಹಾಗೂ ಮತ್ತಿತರ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಈಶ್ವರಪ್ಪ ಮತ್ತು ಅವರ ಬೆಂಬಲಿಗರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು.  ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿ ಕೆಲವೆಡೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ಪರಿಸ್ಥಿತಿ ತಿಳಿಗೊಳಿಸಲು ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಿದ್ದಾರೆ. ಆದರೆ ಎರಡೂ ಬಣಗಳ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಭಿನ್ನಮತವನ್ನು ಬಗೆಹರಿಸಲು ಮುರಳೀಧರ್ ರಾವ್ ಕಸರತ್ತು ನಡೆಸುತ್ತಿದ್ದು, ಈಶ್ವರಪ್ಪ ಬಣ ಯಡಿಯೂರಪ್ಪ ಅವರನ್ನು ಬಿಟ್ಟು ಅವರ ಹಿಂಬಾಲಕರನ್ನು ಟಾರ್ಗೆಟ್ ಮಾಡಿ ಬೇಡಿಕೆಗಳನ್ನು ಮುಂದಿಟ್ಟಿದೆ.
ಹೈಕಮಾಂಡ್ ಇದಕ್ಕೆ ಮಣಿಯಲಿದೆಯೇ, ಬಿಕ್ಕಟ್ಟು ಬಗೆಹರಿಯಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin