ಬೆಂಬಲಿಗರಿಗೆ ಕೊಕ್ ನೀಡಿ ಯಡಿಯೂರಪ್ಪ-ಈಶ್ವರಪ್ಪ ಬಣಕ್ಕೆ ಬಿಸಿ ಮುಟ್ಟಿಸಿದ ಹೈಕಮಾಂಡ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-BJP-Eshwarappa

ಬೆಂಗಳೂರು, ಏ.30– ರಾಜ್ಯ ಬಿಜೆಪಿ ಘಟಕದೊಳಗೆ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಮೊದಲ ಹಂತದಲ್ಲಿ ಪಕ್ಷದ ಹೈಕಮಾಂಡ್ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಮತ್ತು ಕೆ.ಎಸ್.ಈಶ್ವರಪ್ಪ ಬಣದ ಬೆಂಬಲಿಗರನ್ನು ಹುದ್ದೆಯಿಂದ ಮುಕ್ತಿಗೊಳಿಸುವ ಮೂಲಕ ಪಕ್ಷದಲ್ಲಿ ಅಶಿಸ್ತು ಸಹಿಸುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಿದೆ.  ಅಚ್ಚರಿಯ ಬೆಳವಣಿಗೆಯಲ್ಲಿ ಬಿಎಸ್‍ವೈ ಜತೆ ಗುರುತಿಸಿಕೊಂಡಿದ್ದ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ, ಪಕ್ಷದ ವಕ್ತಾರ ಗೋ.ಮಧುಸೂದನ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಬಣದ ಉಪಾಧ್ಯಕ್ಷರಾದ ಭಾನು ಪ್ರಕಾಶ್ ಮತ್ತು ನಿರ್ಮಲ್‍ಕುಮಾರ್ ಸುರಾನ ಅವರುಗಳಿಗೆ ಹುದ್ದೆಯಿಂದ ಕೊಕ್ ನೀಡಲಾಗಿದೆ.ಈ ಮೂಲಕ ಪಕ್ಷದಲ್ಲಿ ಯಾರೊಬ್ಬರೂ ದೊಡ್ಡವರಲ್ಲ, ಯಾರೇ ಆಗಲಿ ಅಶಿಸ್ತು ಉಂಟುಮಾಡಿದರೆ ಶಿಸ್ತುಕ್ರಮಕ್ಕೆ ಹಿಂದು ಮುಂದು ನೋಡುವುದಿಲ್ಲ ಎಂದು ಉಭಯ ಬಣದ ಭಿನ್ನರಿಗೆ ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್ ಖಡಕ್ ಸಂದೇಶ ನೀಡಿದ್ದಾರೆ.  ಬಿಜೆಪಿ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದರ ಹಿನ್ನೆಲೆಯಲ್ಲಿ ಗೋ.ಮಧುಸೂದನ್, ರೇಣುಕಾಚಾರ್ಯ ಅವರಿಗೆ ಕೊಕ್ ನೀಡಿದ್ದರೆ, ಯಡಿಯೂರಪ್ಪ ನಾಯಕತ್ವ ವಿರುದ್ಧ ಭಿನ್ನಮತೀಯ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಭಾನುಪ್ರಕಾಶ್ ಹಾಗೂ ನಿರ್ಮಲ್ ಕುಮಾರ್ ಸುರಾನಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ನಿನ್ನೆ ಸಂಜೆ ನಗರಕ್ಕೆ ಆಗಮಿಸಿದ್ದ ಮುರಳೀಧರ್‍ರಾವ್ ಪಕ್ಷದ ಕೆಲವು ಪ್ರಮುಖ ನಾಯಕರಿಂದ ಅಭಿಪ್ರಾಯ ಪಡೆದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‍ಲಾಲ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.  ವರದಿ ನೀಡುವ ಮೊದಲೇ ಎರಡೂ ಬಣಗಳ ಬೆಂಬಲಿಗರನ್ನು ಪಕ್ಷದ ಪ್ರಮುಖ ಸ್ಥಾನಗಳಿಂದ ಕಿತ್ತುಹಾಕಬೇಕೆಂದು ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಮುರಳೀಧರ್‍ರಾವ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಸುಮ್ಮನಿರಲ್ಲ:

ಪಕ್ಷದ ಕಚೇರಿಯಲ್ಲಿ ಮುರಳೀಧರ್‍ರಾವ್ ಶಾಸಕರಾದ ಆರ್.ಅಶೋಕ್, ಮುನಿರಾಜು, ನಾರಾಯಣಸ್ವಾಮಿ ಸತೀಶ್‍ರೆಡ್ಡಿ, ಮಾಜಿ ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಹಲವರ ಅಭಿಪ್ರಾಯ ಪಡೆದರು.  ಈ ವೇಳೆ ಪಕ್ಷದಲ್ಲಿ ನಡೆದಿರುವ ಕೆಲ ವಿದ್ಯಮಾನಗಳು ಭಾರೀ ನಷ್ಟ ತಂದಿವೆ. ಕಾರ್ಯಕರ್ತರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಅಳಲು ತೋಡಿಕೊಂಡರು. ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಶಾಶ್ವತ ಕಡಿವಾಣ ಹಾಕದಿದ್ದರೆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕನಸಿನ ಮಾತು ಎಂದು ಕೆಲವರು ಮುರಳೀಧರರಾವ್ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಹಂತದಲ್ಲಿ ಮುರಳೀಧರ್‍ರಾವ್ ಪಕ್ಷದಲ್ಲಿ ಇನ್ನು ಮುಂದೆ ಅಶಿಸ್ತಿಗೆ ಅವಕಾಶ ಕೊಡುವುದಿಲ್ಲ. ಅಂತಹ ಚಟುವಟಿಕೆಗಳನ್ನು ನಿಯಂತ್ರಿಸಲಾಗುವುದು. ಪಕ್ಷದೊಳಗೆ ಎಷ್ಟೇ ದೊಡ್ಡವರಿದ್ದರೂ ಅವರು ಅಶಿಸ್ತು ತೋರಿದರೂ ಸಹಿಸಲ್ಲ. ಯಾರೇ ಆಗಲಿ ಶಿಸ್ತುಕ್ರಮ ಜರುಗಿಸಲು ವರಿಷ್ಠರು ತಮಗೆ ಸೂಚನೆ ನೀಡಿದ್ದಾರೆಂದು ಮುಖಂಡರಿಗೆ ಎಚ್ಚರಿಸಿದ್ದಾರೆ.  ಪದೇ ಪದೇ ಭಿನ್ನಮತೀಯ ಚಟುವಟಿಕೆಗಳು ನಡೆದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಬಣಗಳ ಗುದ್ದಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin