ನಾಳೆಯಿಂದ ಸಿಇಟಿ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

CET01

ಬೆಂಗಳೂರು, ಮೇ 1-ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಾಳೆಯಿಂದ ಮೂರು ದಿನಗಳ ಕಾಲ ಸಾಮಾನ್ಯ ಪ್ರವೇಶ (ಸಿಇಟಿ)ಪರೀಕ್ಷೆ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಪರೀಕ್ಷೆಯನ್ನು ಈ ಬಾರಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ನಡೆಸುತ್ತಿದೆ. ಒಟ್ಟು 1.85ಲಕ್ಷ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.  ಬೆಂಗಳೂರಿನ 82 ಪರೀಕ್ಷಾ ಕೇಂದ್ರಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 404 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ನಾಳೆ ಬೆಳಗ್ಗೆ 10.30 ರಿಂದ 11.50ರವರೆಗೆ ಜೀವಶಾಸ್ತ್ರ ಪರೀಕ್ಷೆ ನಡೆದರೆ, 2.30ರಿಂದ 3.50ರವರೆಗೆ ಗಣಿತ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 3 ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.

ಗಡಿನಾಡು ಹಾಗೂ ಹೊರನಾಡು ಅಭ್ಯರ್ಥಿಗಳಿಗಾಗಿ ಕನ್ನಡ ಭಾಷಾ ಪರೀಕ್ಷೆಯನ್ನು ಇದೇ 4 ರಂದು 11.30ರಿಂದ 12.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುತ್ತದೆ.
ಸಿಇಟಿ ಪರೀಕ್ಷಾ ಭದ್ರತೆಗೆ ಈಗಾಗಲೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆಯಾ ಜಿಲ್ಲಾಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಹಾಯಕ ಆಯುಕ್ತರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ.

ಪರೀಕ್ಷಾ ಕಾರ್ಯಕ್ಕೆ ಒಟ್ಟು 404 ವೀಕ್ಷಕರು, 404 ಪ್ರಶ್ನೆ ಪತ್ರಿಕಾ ಪಾಲಕರು, 808 ವಿಶೇಷ ಜಾಗೃತದಳದ ಸದಸ್ಯರನ್ನು ನಿಯೋಜಿಸಲಾಗಿದೆ. ಅಲ್ಲದೆ, 11,625 ಕೊಠಡಿ ಮೇಲ್ವಿಚಾರಕರು ಮತ್ತು 32 ಸಾವಿರ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ.  ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನೀಲಿ ಅಥವಾ ಕಪ್ಪು ಬಣ್ಣದ ಬಾಲ್‍ಪಾಯಿಂಟ್ ಪೆನ್ನನ್ನು ಬಳಸಬೇಕು. ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶಪತ್ರದ ಜೊತೆಗೆ ಕಾಲೇಜಿನ ಗುರುತಿನ ಚೀಟಿ, ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರ, ಬಸ್‍ಪಾಸ್, ಆಧಾರ್‍ಕಾರ್ಡ್ ಸೇರಿದಂತೆ ಯಾವುದಾದರೊಂದು ಗುರುತಿನ ಚೀಟಿ ಕೊಂಡೊಯ್ಯಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin