ಬಿಜೆಪಿ ಭಿನ್ನಮತೀಯರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಿರಲು ವರಿಷ್ಠರು ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-001

ಬೆಂಗಳೂರು,ಮೇ.1-ಪಕ್ಷದ ಉಳಿವಿಗಾಗಿ ರಾಜ್ಯಾಧ್ಯಕ್ಷರ ವಿರುದ್ಧ ತೊಡೆ ತಟ್ಟಿರುವ ಬಿಜೆಪಿ ಭಿನ್ನಮತೀಯರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಎಚ್ಚರಿಕೆಯ ಸಂದೇಶ ನೀಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಈಶ್ವರಪ್ಪ , ಮುಖಂಡರಾದ ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನ, ಸೋಮಣ್ಣ ಬೇವಿನ ಮರದ್, ಸೊಗಡು ಶಿವಣ್ಣ , ಎಸ್.ಎ.ರವೀಂದ್ರನಾಥ್, ಎಚ್.ಎಸ್.ಶಿವಯೋಗಿ ಸ್ವಾಮಿ ಸೇರಿದಂತೆ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡಿರುವವರ ವಿರುದ್ಧ ತಲೆದಂಡವಾಗಬೇಕೆಂಬುದು ಯಡಿಯೂರಪ್ಪ ಬಣದ ಪಟ್ಟು .   ಆದರೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ಒತ್ತಾಸೆಯಂತೆ ಭಿನ್ನರ ವಿರುದ್ಧ ಕ್ರಮ ಕೈಗೊಂಡರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ವರಿಷ್ಠರದ್ದಾಗಿದೆ. 

 

ಒಂದು ವೇಳೆ ಬಿಎಸ್‍ವೈ ಮುಂದಿಟ್ಟಿರುವ ಬೇಡಿಕೆಯಂತೆ ಈಶ್ವರಪ್ಪ ಹಾಗೂ ಅವರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡರೆ ಪಕ್ಷದಲ್ಲಿ ಇನ್ನಷ್ಟು ಅಶಿಸ್ತಿಗೆ ಕಾರಣವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸದಂತೆ ರಾಷ್ಟ್ರೀಯ ನಾಯಕರು ಎಚ್ಚರಿಕೆ ನೀಡಲಿದ್ದಾರೆ ಎನ್ನಲಾಗಿದೆ.   ಈಶ್ವರಪ್ಪ ಎಷ್ಟರಮಟ್ಟಿಗೆ ಪಕ್ಷಕ್ಕೆ ಮತ ತಂದು ಕೊಡುತ್ತಾರೆ ಎಂಬುದಕ್ಕಿಂತ ಹೆಚ್ಚಾಗಿ ಹಿಂದುಳಿದ ನಾಯಕನೊಬ್ಬನನ್ನು ಪಕ್ಷದಿಂದ ಹೊರ ಹಾಕಿದರೆ ಇದು ಪ್ರತಿಪಕ್ಷಗಳ ಪಾಲಿಗೆ ಪ್ರಮುಖ ಅಸ್ತ್ರವಾಗಲಿದೆ. ಹೇಳಿಕೇಳಿ ಬಿಜೆಪಿ ಮೇಲ್ವರ್ಗದ ಪಕ್ಷ ಎಂಬ ಆಪಾದನೆಯಿದೆ. ಇಂತಹ ಸಂದರ್ಭದಲ್ಲಿ ಉಗುರಿನಿಂದ ಹೋಗುವುದಕ್ಕೆ ಕೊಡಲಿ ಯಾಕೆ ಬಳಸಬೇಕೆಂಬ ಆಲೋಚನೆ ವರಿಷ್ಠರಲ್ಲಿದೆ.

ರಾಯಣ್ಣ ಬ್ರಿಗೇಡ್ ಮೂಲಕ ಈಶ್ವರಪ್ಪ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ. ಅವರು ಪ್ರತಿನಿಧಿಸುವ ಕುರುಬ ಸಮುದಾಯ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಇದೆ ಎಂಬುದು ಎಷ್ಟು ಸತ್ಯವೋ ಒಂದಿಷ್ಟು ಮತದಾರರು ಈಶ್ವರಪ್ಪನವರ ಜೊತೆ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಮರೆಯಬಾರದು ಎಂಬ ಸಲಹೆಯನ್ನು ರಾಜ್ಯ ನಾಯಕರು ನೀಡಿದ್ದಾರೆ.
ರಾಜ್ಯದಲ್ಲಿ ಪಕ್ಷ ಸಂಕಷ್ಟ ಸ್ಥಿತಿಯಲ್ಲಿದ್ದಾಗಲೂ ಈಶ್ವರಪ್ಪ ಪಕ್ಷವನ್ನು ಮುನ್ನಡೆಸಿದ್ದಾರೆ. ಮೂರು ಬಾರಿ ರಾಜ್ಯಾಧ್ಯಕ್ಷರಾಗಿ, ಸಚಿವರಾಗಿ, ಪರಿಷತ್‍ನ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿರುವ ಅವರನ್ನು ಏಕಾಏಕಿ ಯಡಿಯೂರಪ್ಪ ಒತ್ತಾಸೆಯಂತೆ ಪಕ್ಷದಿಂದ ಕಿತ್ತು ಹಾಕುವುದು ಸರಿಯಲ್ಲ ಎಂದು ಕೆಲವರು ಹೇಳಿದ್ದಾರೆ.

ಇನ್ನು ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಬೇಡಿಕೆಯಂತೆ ಕ್ರಮ ಕೈಗೊಂಡರೆ ಮುಂದೆ ಇಡೀ ಪಕ್ಷವೇ ಅವರ ಕೈ ವಶವಾಗಲಿದೆ. ಮುಂದೆ ಯಾರೊಬ್ಬರು ಪ್ರಶ್ನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಾಕಷ್ಟು ಅಳೆದುತೂಗಿ ನಿರ್ಧಾರ ಪ್ರಕಟಿಸುವಂತೆ ಕೆಲ ನಾಯಕರು ಸಲಹೆ ಮಾಡಿದ್ದಾರೆ.
ಈಶ್ವರಪ್ಪ ಎಂದೂ ಕೂಡ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಲ್ಲ. ಪಕ್ಷದ ಕೆಲ ನಿಷ್ಠರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಸಭೆ ನಡೆಸಿದ್ದಾರೆ.
ಇದು ಅಶಿಸ್ತಿನ ಉಲ್ಲಂಘನೆಯಾಗಿದ್ದರೂ ಅದರಲ್ಲಿ ಪಕ್ಷದ ಹಿತದೃಷ್ಟಿಯೂ ಅಡಗಿದೆ. ಈಶ್ವರಪ್ಪನವರನ್ನು ವರಿಷ್ಠರು ಕರೆಸಿ ಮಾತುಕತೆ ನಡೆಸುವ ಮೂಲಕ ಸಮಾಧಾನಪಡಿಸಬೇಕು, ಆತುರದ ನಿರ್ಧಾರ ಕೈಗೊಂಡರೆ ಪಕ್ಷಕ್ಕೆ ಮುಳುವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  ಇದನ್ನು ಸಕರಾತ್ಮಕವಾಗಿ ಪರಿಗಣಿಸಿರುವ ಕೇಂದ್ರ ನಾಯಕರು ಭಿನ್ನಮತೀಯರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಎಚ್ಚರಿಕೆಯ ಸಂದೇಶ ನೀಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin