ಮೂಲಭೂತ ಸೌಕರ್ಯ ವಂಚಿತ ಆಸ್ಪತ್ರೆಗೆ ಬೇಕು ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

gowribidanuru-1
– ದೇವಿ ಮಂಜುನಾಥ್, ಗೌರಿಬಿದನೂರು
ಗೌರಿಬಿದನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ.ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ನಿತ್ಯ ನೂರಾರು ಮಂದಿ ಬರುತ್ತಾರೆ. ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಸುತ್ತಮುತ್ತಲಿನವರು ಇದೇ ಆಸ್ಪತ್ರೆಗೆ ಕರೆ ತರುತ್ತಾರೆ.  ಆದರೆ ತುರ್ತು ಚಿಕಿತ್ಸೆ ನೀಡಲು ವಿದ್ಯುತ್ ಇರುವುದೇ ಇಲ್ಲ. ಎಷ್ಟೋ ವೇಳೆ ರೋಗಿಗಳು ಕತ್ತಲಲ್ಲೇ ಇರಬೇಕಾಗುತ್ತದೆ. ಬಹಳಷ್ಟು ಮಂದಿ ಒಳರೋಗಿಗಳೂ ಇರುತ್ತಾರೆ. ಮೊದಲೇ ಬೇಸಿಗೆ ಕರೆಂಟ್ ಇಲ್ಲದೆ ಫ್ಯಾನ್‍ಗಳೂ ಇದ್ದರೂ ಇಲ್ಲದಂತಾಗಿದೆ. ಸೆಖೆಯಲ್ಲೇ ಸಾಯುವಂತಾಗಿದೆ ಎಂದು  ರೋಗಿಗಳು ಹಾಗೂ ಅವರನ್ನು ನೋಡಿಕೊಳ್ಳಲು ಬರುವ ಸಂಬಂಧಿಕರು ಅಳಲು ತೋಡಿಕೊಳ್ಳುತ್ತಾರೆ.

ಕರೆಂಟ್ ಇಲ್ಲದಾಗ ಯುಪಿಎಸ್ ಬಳಸಬಹುದು. ಆದರೆ ಈ ಆಸ್ಪತ್ರೆಯಲ್ಲಿದ್ದ ಯುಪಿಎಸ್ ಕೆಟ್ಟು ಹೋಗಿದೆ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳಿದರೆ ಜನರೇಟರ್‍ಗೆ ಡೀಸೆಲ್ ಇಲ್ಲ ಎಂದು ಹೇಳುತ್ತಾರೆ. ಇದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಗೊತ್ತಾಗುವುದಿಲ್ಲವೇ ಅಥವಾ ಗೊತ್ತಿದ್ದರೂ ನಿರ್ಲಕ್ಷ್ಯದಿಂದ ಇದ್ದಾರೋ ತಿಳಿಯದಾಗಿದೆ ಎನ್ನುತ್ತಾರೆ ಸಾರ್ವಜನಿಕರು.ಕರೆಂಟ್ ಇಲ್ಲದಾಗ ಅತ್ಯವಶ್ಯಕವಾಗಿ ಬೇಕಾಗುವ ಜನರೇಟರ್ ಬಳಕೆ ಮಾಡುವುದನ್ನು ಸಮಜಾಯಿಷಿ ನೀಡುವುದು ಎಷ್ಟು ಸರಿ..?  ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯಲು ನೀರಿಲ್ಲ. ಇದನ್ನು ಪ್ರಶ್ನಿಸಿದರೆ ಆಸ್ಪತ್ರೆಯ ಆವರಣದಲ್ಲಿರುವ ಕೊಳವೆ ಬಾವಿ ಬತ್ತಿ ಹೋಗಿದೆ ಎನ್ನುತ್ತಾರೆ ಸಿಬ್ಬಂದಿ. ಹೊರಗಿನಿಂದ ಹಣ ಕೊಟ್ಟು ನೀರು ತರಿಸಿಕೊಳ್ಳುವ ಪರಿಸ್ಥಿತಿ ಇದೆ. ನಾವು ಬಡವರು. ನಮ್ಮಂತವರಿಗಾಗಿ ಇರುವ ಈ ಆಸ್ಪತ್ರೆಯಲ್ಲಿ ನೀರನ್ನು ಹಣ ಕೊಟ್ಟು ತರುವುದಾದರೆ ನಮಗೆ ತುಂಬಾ ಕಷ್ಟವಾಗುತ್ತದೆ ಎಂದು ರೋಗಿಗಳು ತುಂಬಾ ಬೇಸರ ಪಡುತ್ತಾರೆ.ಇನ್ನು ಆಸ್ಪತ್ರೆಯಲ್ಲಿ ನೈರ್ಮಲ್ಯವೂ ಸರಿಯಾಗಿಲ್ಲ. ಸ್ವಚ್ಛತೆ ಇಲ್ಲದೆ ಇನ್ನಷ್ಟು ರೋಗ ಹೊತ್ತುಕೊಳ್ಳಬೇಕಾಗಿದೆ ಎಂದು ಆರೋಪಿಸುತ್ತಾರೆ ಜನರು.

ಇದೆಲ್ಲಾ ವಿಷಯ ತಿಳಿದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ವೇಣುಗೋಪಾಲರೆಡ್ಡಿ ಮತ್ತಿತರರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಕರೆಂಟ್ ಇಲ್ಲದೆ ಗೆದರೆ ಗ್ರಾಮದ ಮಹಿಳೆಯೊಬ್ಬಳಿಗೆ ಚಿಕಿತ್ಸೆ ನೀಡದೆ ಸುಮ್ಮನೆ ಕೂರಿಸಿದ್ದುದು ಕಂಡು ಬಂದಿತು.ತಕ್ಷಣ ವೈದ್ಯರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ದೂರವಾಣಿ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೇಶವ ರೆಡ್ಡಿಯವರಿಗೆ ಆಸ್ಪತ್ರೆಯ ಸ್ಥಿತಿಯನ್ನು ತಿಳಿಸಿದ್ದಾರೆ. ನಾನು ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿ ವ್ಯವಸ್ಥೆ ಸರಿಪಡಿಸುವುದಾಗಿ ಕೇಶವರೆಡ್ಡಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಜಿಪಂ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಸಾರ್ವಜನಿಕ ಆಸ್ಪತ್ರೆಯ ಮೂಲಭೂತ ಸೌಕರ್ಯಗಳಿಗಾಗಿಯೇ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ಇದು ಸಮರ್ಪಕವಾಗಿ ಸದುಪಯೋಗವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ವಿದ್ಯುತ್, ನೀರಿನ ಸಮಸ್ಯೆ ಸರಿಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.  ಇನ್ನಾದರೂ ಆಸ್ಪತ್ರೆಯಲ್ಲಿ ವಿದ್ಯುತ್ ಸರಿಹೋದೀತೇ. ರೋಗಿಗಳಿಗೆ ಶುದ್ಧ ಕುಡಿಯುವ ನೀರು ಸಿಕ್ಕೀತೆ ಎಂಬುದನ್ನು ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin