ರಾಜ್ಯದ ಪ್ರಗತಿಗೆ ಸಹಕರಿಸಿ : ಕೈಗಾರಿಕೋದ್ಯಮಿಗಳಿಗೆ ದೇಶಪಾಂಡೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

cm

ಬೆಂಗಳೂರು, ಮೇ 3- ರಕ್ಷಣಾ ಸೇವೆ, ನ್ಯಾನೋ ಟೆಕ್ನಾಲಜಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತಿದ್ದು, ಇದೊಂದು ಮೈಲುಗಲ್ಲಾಗಲಿದೆ. ಇದಕ್ಕೆ ಕೈಗಾರಿಕೋದ್ಯಮಿಗಳ ಸಹಕಾರ ಅತ್ಯಗತ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ತಿಳಿಸಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಶತಮಾನೋತ್ಸವ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೈಗಾರಿಕಾ ಸಂಸ್ಥೆಗಳು ಉದಯೋನ್ಮುಖ ಕೈಗಾರಿಕೆಗಳತ್ತ ಹೆಚ್ಚು ಗಮನ ಹರಿಸಬೇಕು. ಇದರಿಂದ ತನ್ನ ಅವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ನೂತನ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.ದೇಶಾದ್ಯಂತ ಕೈಗಾರಿಕೆಗಳ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹರಸಾಹಸ ಪಡುತ್ತಿವೆ. ಆದರೆ, ಉದ್ಯೋಗ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸೃಷ್ಟಿಯಾಗುತ್ತಿಲ್ಲ. ಮೇಕ್ ಇನ್ ಇಂಡಿಯಾ ಸ್ಟಾರ್ಟಪ್‍ನಂತಹ ಹಲವಾರು ಯೋಜನೆಗಳ ಮೂಲಕ ಕೈಗಾರಿಕೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರೂ ಉದ್ಯೋಗ ನಿರ್ಮಾಣದಲ್ಲಿ ಮಾತ್ರ ಹಿಂದೆ ಬಿದ್ದಿದ್ದೇವೆ ಎಂದು ಹೇಳಿದರು.ಬಹುತೇಕ ರಾಜ್ಯಗಳಲ್ಲಿ ಉದ್ಯೋಗಸೃಷ್ಟಿ ಶೂನ್ಯವಾಗಿದೆ. ಕರ್ನಾಟಕದಲ್ಲಿ ಶೇ.5ರಷ್ಟು ಮಾತ್ರ ಉದ್ಯೋಗ ಸೃಷ್ಟಿಯಾಗುತ್ತಿವೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ವಿಷಾದಿಸಿದರು.

1995-96ರಲ್ಲಿ ಬೆಂಗಳೂರು ಐಟಿ ರಾಜಧಾನಿಯಾಗುತ್ತದೆ ಎಂದು ಹೇಳಿದ್ದೆ. ಅದೇ ರೀತಿ ಆಗಿದೆ. 200 ಕೋಟಿಯಷ್ಟು ರಫ್ತು ಸಹ ನಡೆಯುತ್ತಿರಲಿಲ್ಲ. ಆದರೆ, ಇದೀಗ ಸಾವಿರಾರು ಕೋಟಿಯ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಎಂದರು. ಎಫ್‍ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್ ಮಾತನಾಡಿ, ಕೈಗಾರಿಕೆಗಳಿಗೆ ನೀಡಲಾಗುತ್ತಿದ್ದ ಭೂಮಿಗೆ ಈ ಹಿಂದೆ ಇದ್ದ 99 ವರ್ಷದ ಗುತ್ತಿಗೆ ಅವಧಿಯನ್ನು ಇತ್ತೀಚೆಗೆ ಸರ್ಕಾರ ಲೀಸ್ ಕಂ ಸೇಲ್ ಒಪ್ಪಂದದ ಮೂಲಕ 10 ವರ್ಷಗಳಿಗೆ ನೀಡಲು ಉದ್ದೇಶಿಸಿರುವುದು ಅಭಿನಂದನೀಯ ಎಂದರು.ಇದರೊಂದಿಗೆ ಸರ್ಕಾರ ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದು ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.

ನೂತನವಾಗಿ ನಿರ್ಮಿಸಿರುವ ಶತಮಾನೋತ್ಸವ ಕಟ್ಟಡದಲ್ಲಿ ಕೌಶಲ್ಯಾಧಾರಿತ ತರಬೇತಿ ಕೇಂದ್ರ, ಆಡಿಟೋರಿಯಂ, ವಿವಿಧ ಸೌಲಭ್ಯಗಳ ಮಾಹಿತಿ ಕೇಂದ್ರ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಕೈಗಾರಿಕೋದ್ಯಮಿಗಳಿಗೆ ಎಲ್ಲ ರೀತಿಯಲ್ಲೂ ಅನುಕೂಲವಾಗಲಿದೆ ಎಂದರು.  ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ತಲ್ಲಂ ಆರ್.ದ್ವಾರಕನಾಥ್, ಕಟ್ಟಡ ಸಮಿತಿ ಅಧ್ಯಕ್ಷ ಮಾನಂದಿ ಎನ್.ಸುರೇಶ್ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin