ಲಂಚ ಸ್ವೀಕರಿಸಿದ ಆರೋಪದ ಮೇಲೆ ಐಟಿ ಆಯುಕ್ತನೇ ಅರೆಸ್ಟ್ : 1.5 ಕೋಟಿ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

Income-Tax

ನವದೆಹಲಿ, ಮೇ 3-ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ಇದು. ಪ್ರಮುಖ ಕಾರ್ಪೊರೇಟ್ ಸಮೂಹವೊಂದರ ಓಲೈಕೆಗಾಗಿ 19 ಲಕ್ಷ ರೂ.ಗಳ ಲಂಚ ಸ್ವೀಕರಿಸಿದ ಆರೋಪದ ಮೇಲೆ ಆದಾಯ ತೆರಿಗೆ ಆಯುಕ್ತ ಮತ್ತು ಇತರ ಐವರನ್ನು ಕೇಂದ್ರೀಯ ತನಿಖಾ ದಳ-ಸಿಬಿಐ ವಿವಿಧೆಡೆ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಈ ದಾಳಿ ವೇಳೆ ಒಟ್ಟು 1.5 ಕೋಟಿ ರೂ.ಗಳ ಹಣವನ್ನು ಜಪ್ತಿ ಮಾಡಲಾಗಿದೆ.   ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಐಟಿ ಆಯುಕ್ತ ಬಿ.ಬಿ.ರಾಜೇಂದ್ರ ಪ್ರಸಾದ್ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದರೆ, ಮುಂಬೈನಲ್ಲಿ ಇತರ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.ಆಯುಕ್ತರು ಕಾರ್ಪೊರೇಟ್ ಗ್ರೂಪ್ ನ್ನು ತೆರಿಗೆ ವಂಚನೆಯಿಂದ ಪಾರು ಮಾಡಲು 19 ಲಕ್ಷ ರೂ.ಗಳ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.   ಪ್ರತಿಷ್ಠಿತ ಸಂಸ್ಥೆಯಿಂದ ಐಟಿ ಆಯುಕ್ತರು ಲಂಚ ಪಡೆದು ಆ ಕಂಪೆನಿಯನ್ನು ಓಲೈಸಲು ಮತ್ತು ಕಡಿಮೆ ಮೊತ್ತದ ತೆರಿಗೆ ನಿಗದಿಗೊಳಿಸುತ್ತಿದ್ದಾರೆ ಎಂಬ ಖಚಿತ ವರ್ತಮಾನದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ.   ಐಟಿ ಆಯುಕ್ತ ರಾಜೇಂದ್ರ ಪ್ರಸಾದ್ ಈ ಹಿಂದೆಯೂ ಲಂಚ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಆರೋಪ ಎದುರಿಸುತ್ತಿದ್ದಾರೆ. ತೆರಿಗೆ ವಂಚಕರನ್ನು ಪತ್ತೆ ಮಾಡಿ ಶಿಕ್ಷಿಸಬೇಕಾದ ಉನ್ನತ ಹುದ್ದೆಯಲ್ಲಿರುವ ಆಯುಕ್ತರೇ ಲಂಚಾವತಾರದಲ್ಲಿ ತೊಡಗಿರುವ ಮತ್ತಷ್ಟು ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin