ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ 16ರಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

puttanayya

ಬೆಂಗಳೂರು, ಮೇ 4- ರಾಷ್ಟ್ರೀಕೃತ, ಸಹಕಾರ ಬ್ಯಾಂಕು ಗಳು ಹಾಗೂ ಸಂಘ ಸಂಸ್ಥ ಗಳಿಂದ ರೈತರು ಪಡೆದಿರುವ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನ್ನಾ ಮಾಡುವಂತೆ ಆಗ್ರಹಿಸಿ ಇದೇ 16ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸ ಲಾಗುವುದು ಎಂದು ಶಾಸಕ ಪುಟ್ಟಣ್ಣಯ್ಯ ಎಚ್ಚರಿಸಿದ್ದಾರೆ. ಚಹಾ ಮೇಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಾನು ಶೇ.50ರಷ್ಟು ಸಾಲವನ್ನು ಮನ್ನಾ ಮಾಡುವುದಾಗಿ ಹೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸಬೇಡಿ, ಸಾಲಮನ್ನಾ ಮಾಡುವುದು ಆಯಾ ರಾಜ್ಯ ಸರ್ಕಾರಗಳ ಕೆಲಸ ಎಂದು ಹೇಳುತ್ತಾ ಪರಸ್ಪರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರೋಪ ಪ್ರತ್ಯಾರೋಪ ಮಾಡುತ್ತಿವೆ. ಆದರೆ ಸಂಕಷ್ಟ ಸಿಲುಕಿರುವ ರೈತ ಆತ್ಮಹತ್ಯೆ ದಾರಿ ಹಿಡಿಯುವಂತಹ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು.ಕಾರ್ಪೊರೇಟರ್  ಸಂಸ್ಥೆಗಳ ಒಂದು ಲಕ್ಷ ಹದಿನಾರು ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ರಾಜ್ಯ ಸರ್ಕಾರಕ್ಕೆ ಯಾವುದೇ ಸಾಲ ಮನ್ನಾ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಹೇಳುತ್ತಿದೆ. ಆದರೆ ಇತ್ತ ರಾಜ್ಯ ಸರ್ಕಾರ ಶೇ.50ರಷ್ಟು ಸಾಲವನ್ನು ರಾಜ್ಯ ಸರ್ಕಾರ ಸಿದ್ಧವಿದೆ. ಉಳಿದ 50ರಷ್ಟು ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಲು ಮುಂದಾಗಬೇಕಿದೆ ಎಂದು ಹೇಳುತ್ತಿದೆ. ಇಬ್ಬರ ನಡುವೆ ರೈತ ಸಿಲುಕಿ ನಲುಗುತ್ತಿದ್ದಾನೆ. ಕುಡಿಯುವ ನೀರಿಲ್ಲ. ಊಟಕ್ಕೆ ಗತಿಯಿಲ್ಲ. ಜಾನುವಾರುಗಳಿಗೆ ಮೇವಿಲ್ಲ. ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಒಂದರ ಹಿಂದೆ ಒಂದರಂತೆ ಕಷ್ಟಗಳ ಸರಮಾಲೆಯನ್ನೇ ಹೊದ್ದು ಜೀವನ ಸವೆಸುತ್ತಿರುವ ರೈತನಿಗೆ ಇದರ ಮೇಲೆ ಬ್ಯಾಂಕ್‍ನವರ ಕಿರುಕುಳ ಹೆಚ್ಚಾಗುತ್ತಿದೆ. ಜಮೀನು, ಒಡವೆಯನ್ನು ಜಪ್ತಿ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ಪರ-ವಿರೋಧ ಮಾಡುತ್ತಾ ನಿಲ್ಲದೆ ಅನ್ನದಾತನ ನೆರವಿಗೆ ಧಾವಿಸಬೇಕಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು, ಸಹಕಾರ ಸಂಘ, ಸ್ವಸಹಾಯ ಸಂಘ ಸೇರಿದಂತೆ ಎಲ್ಲೇ ಸಾಲ ಮಾಡಿದ್ದರೂ ಮನ್ನ ಮಾಡಲು ಸರ್ಕಾರ ಮುಂದಾಗಬೇಕು. ರೈತನ ಮೇಲೇರಿರುವ ಹೊರೆಯನ್ನು ಇಳಿಸಿ ಅವರ ಜೀವ ಉಳಿಸಬೇಕು. ಮೋದಿ ಸರ್ಕಾರ ಮಾಡಲಿ ಎಂದು ಸಿದ್ದು ಸರ್ಕಾರ ಕೂರುವುದು ಅಥವಾ ರಾಜ್ಯ ಸರ್ಕಾರ ಮಾಡಲಿ ಎಂದು ಕೇಂದ್ರ ಸುಮ್ಮನಾಗುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಇರುವ ಅಲ್ಪಸ್ವಲ್ಪ ನೀರಿನಲ್ಲಿ ಬೆಳೆ ಬೆಳೆಯೋಣವೆಂದರೆ ಹಳ್ಳಿಗಳಲ್ಲಿ ತ್ರಿ ಫೇಸ್ ವಿದ್ಯುತ್ ಇಲ್ಲದೆ, ನೀರು ಸಿಗದೆ ವಿಷ ಸೇವಿಸುವಂತಹ ಸ್ಥಿತಿಗೆ ರೈತ ತಲುಪಿದ್ದಾನೆ. ಇಡೀ ದೇಶದಲ್ಲೇ ರೈತರ ಸಾವಿನ ಸಂಖ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಇನ್ನು ಎಷ್ಟು ಜನರ ಬಲಿ ಪಡೆಯಬೇಕು. ಇನ್ನಾದರೂ ರೈತರ ಸಾಲ ಮನ್ನಾ ಮಾಡಿ ಎಂದು ಪುಟ್ಟಣ್ಣಯ್ಯ ಆಗ್ರಹಿಸಿದರು.

ಬರಗಾಲದ ಕುರಿತಂತೆ ಅಧ್ಯಯನ ನಡೆಸಲು ಶಾಸಕರು ಹೊರ ರಾಜ್ಯಗಳಿಗೆ ಪ್ರವಾಸ ತೆರಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ರೋಮ್ ಹೊತ್ತಿ ಉರಿಯುತ್ತಿದ್ದಾಗ ಇಲ್ಲಿನ ರಾಜ ನೀರೋ ಪಿಟೀಲು ಭಾರಿಸುತ್ತಿದ್ದ ಎಂಬಂತೆ ಇಲ್ಲಿನ ಪರಿಸ್ಥಿತಿಯು ಆಗುತ್ತದೆ. ಜನ ಇಲ್ಲಿ ನೀರು, ಅನ್ನಕ್ಕಾಗಿ ಪರಿತಪಿಸುತ್ತಿದ್ದರೆ, ವಿದೇಶ ಪ್ರವಾಸಕ್ಕೆ ತೆರಳುವುದರಲ್ಲಿ ಯಾವ ನೈತಿಕತೆ ಇದೆ. ವಿದೇಶಕ್ಕೆ ತೆರಳುವ ಶಾಸಕರ ಪಟ್ಟಿಯಲ್ಲಿ ನನ್ನ ಹೆಸರು ಇದೆ. ಆದರೆ ನಾನು ಪ್ರವಾಸ ಹೋಗುವುದಿಲ್ಲ. ಸ್ಪೀಕರ್ ಕೋಳಿವಾಡ ಅವರು ಶಾಸಕರಿಗೆ ಪ್ರವಾಸಕ್ಕೆ ತೆರಳಲು ಅವಕಾಶ ನೀಡಬಾರದು. ಅವಕಾಶ ನೀಡಿದರೆ ಇದು ಹೊಣೆಗೇಡಿತನವಾಗುತ್ತದೆ ಎಂದು ವಾಗ್ದಾಳಿ ಮಾಡಿದರು. ಇದೇ 16ರಂದು ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದೇವೆ. ಸರ್ಕಾರ ರೈತರ ಸಂಕಷ್ಟದ ಬಗ್ಗೆ ಅರಿತು ಅವರ ಸಾಲ ಮನ್ನಾ ಮಾಡಲಿ ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin