ವರಿಷ್ಟರಿಗೇ ಸಡ್ಡು ಹೊಡೆದ ಈಶ್ವರಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

Eshwarappa--01

ಬೆಂಗಳೂರು,ಮೇ 5– ನಾಳೆಯಿಂದ ಮೈಸೂರಿನಲ್ಲಿ ಆರಂಭವಾಗಲಿ ರುವ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಗೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಗೈರುಹಾಜರಾಗುವ ಮೂಲಕ ಕೇಂದ್ರ ನಾಯಕರ ವಿರುದ್ಧ ತೊಡೆ ತಟ್ಟಿದ್ದಾರೆ.  ಈಶ್ವರಪ್ಪ ಜೊತೆಗೆ ಪಕ್ಷದ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡು ವಿಧಾನಪರಿಷತ್ ಸದಸ್ಯರಾದ ಭಾನುಪ್ರಕಾಶ್, ಸೋಮಣ್ಣ ಬೇವಿನ ಮರದ್, ಮಾಜಿ ಶಾಸಕ ಸೊಗಡು ಶಿವಣ್ಣ, ಎಸ್.ಎ.ರವೀಂದ್ರನಾಥ್, ನಿರ್ಮಲಕುಮಾರ್ ಸುರಾನ, ನೇಮಿನಾಯಕ್, ಜಗದೀಶ್ ಮೆಟಗುಡ್ಡ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್‍ಮೂರ್ತಿ, ನಂದೀಶ್ ಸೇರಿದಂತೆ ಮತ್ತಿತರರು ಕಾರ್ಯಕಾರಿಣಿಗೆ ಕೈ ಕೊಡಲು ತೀರ್ಮಾನಿಸಿದ್ದಾರೆ.ಈಗಾಗಲೇ ಇವರೆಲ್ಲರನ್ನೂ ದೂರವಾಣಿ ಮೂಲಕ ಸಂಪರ್ಕಿಸಿರುವ ಈಶ್ವರಪ್ಪ ಯಾವುದೇ ಕಾರಣಕ್ಕೂ ಕಾರ್ಯಕಾರಿಣಿ ಸಭೆಗೆ ಭಾಗವಹಿಸಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಕಳೆದ ಒಂದು ವಾರದ ಹಿಂದೆಯೇ ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಕಾರ್ಯಕಾರಿಣಿ ಸಭೆಯ ಎಲ್ಲ ಸದಸ್ಯರಿಗೂ ಖುದ್ದು ರಾಜ್ಯಾಧ್ಯಕ್ಷರ ಸಹಿವುಳ್ಳ ಪತ್ರವನ್ನು ರವಾನಿಸಿ ಕಾರ್ಯಕಾರಿಣಿಗೆ ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದರು.   ಆದರೆ ಈಶ್ವರಪ್ಪ ಮತ್ತು ಅವರ ಬೆಂಬಲಿಗರು ನಮಗೆ ಆಹ್ವಾನ ಬಂದಿಲ್ಲ ಎಂಬ ಸಬೂಬು ಹೇಳಿಕೊಂಡೇ ಕಾರ್ಯಕಾರಿಣಿಯಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಗೈರುಹಾಜರಾದರೆ ಸಹಜವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಮುಜುಗರ ಉಂಟಾಗುತ್ತದೆ ಎಂಬ ಕಾರಣಕ್ಕಾಗಿಯೇ ಚಕ್ಕರ್ ಹೊಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.   ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಸಹಿ ಹೋಗುವವರೆಗೂ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಬಾರದು. ಈ ಬಾರಿ ಯಡಿಯೂರಪ್ಪನವರ ಅಂಕುಶಕ್ಕೆ ಕಡಿವಾಣ ಹಾಕುವವರೆಗೂ ಬಗ್ಗಬಾರದೆಂಬ ಒಮ್ಮತಕ್ಕೆ ಈಶ್ವರಪ್ಪ ಬಣ ಬಂದಿದೆ.   ವರಿಷ್ಠರ ಆದೇಶವನ್ನು ಧಿಕ್ಕರಿಸಿ ಪದಾಧಿಕಾರಿಗಳ ನೇಮಕಾತಿ ಬದಲಾಯಿಸಲು ಮೀನಾಮೇಷ ಎಣಿಸುತ್ತಿರುವ ಯಡಿಯೂರಪ್ಪ ವಿರುದ್ಧ ಈ ಬಾರಿ ನಿರ್ಣಾಯಕ ಸಮರಕ್ಕಿಳಿದಿರುವ ಈಶ್ವರಪ್ಪ ವರಿಷ್ಠರು ಮಧ್ಯಪ್ರವೇಶ ಮಾಡುವವರೆಗೂ ಪಕ್ಷದ ಚಟುವಟಿಕೆಗಳಿಂದಲೇ ದೂರ ಉಳಿಯಲು ಮುಂದಾಗಿದ್ದಾರೆ.

ಶಿಸ್ತುಕ್ರಮದ ತೂಗುಗತ್ತಿ:

ಒಂದು ವೇಳೆ ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಕಾರ್ಯಕಾರಿಣಿ ಸಭೆಗೆ ಗೈರುಹಾಜರಾದರೆ ಅಶಿಸ್ತು ಕ್ರಮದ ಆರೋಪದ ಮೇಲೆ ಶಿಸ್ತು ಕ್ರಮ ಜರುಗಿಸಲು ಯಡಿಯೂರಪ್ಪ ಬಣ ಕೇಂದ್ರ ವರಿಷ್ಠರ ಮೇಲೆ ಪಟ್ಟು ಹಿಡಿಯಲಿದೆ.   ಉದ್ದೇಶಪೂರ್ವಕವಾಗಿ ಗೈರುಹಾಜರಾಗುವ ಮೂಲಕ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಬಿಎಸ್‍ವೈ ಹಾಗೂ ಬೆಂಬಲಿಗರು ಒತ್ತಡ ಹಾಕಲಿದ್ದಾರೆ.   ಪಕ್ಷದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿರುವ ಈಶ್ವರಪ್ಪ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಪಕ್ಷ ಉಳಿಯಲು ಸಾಧ್ಯವಿಲ್ಲ. ರಾಯಣ್ಣ ಬ್ರಿಗೇಡ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಮಯಾವಕಾಶ ಇರುತ್ತದೆ. ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಅವರಿಗೆ ಬಿಡುವು ಇರುವುದಿಲ್ಲವೇ ಎಂಬ ಪ್ರಶ್ನೆಯನ್ನು ಮುಂದಿಟ್ಟು ಹಣಿಯಲು ಬಿಎಸ್‍ವೈ ತಂತ್ರ ರೂಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin