BIG NEWS : ನಿರ್ಭಯಾ ಗ್ಯಾಂಗ್‍ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಖಾಯಂ

ಈ ಸುದ್ದಿಯನ್ನು ಶೇರ್ ಮಾಡಿ

Nirbhaya

ನವದೆಹಲಿ, ಮೇ 5-ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012 ಡಿಸೆಂಬರ್‍ನ ನಿರ್ಭಯಾ ಗ್ಯಾಂಗ್‍ರೇಪ್ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಇಂದು ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ಈ ಮೂಲಕ ಅತ್ಯಾಚಾರಿಗಳಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನಿಸಿದೆ.   ನಾಲ್ವರು ದೋಷಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಇಂದು ಈ ಮಹತ್ವದ ತೀರ್ಪು ದೋಷಿಗಳಿಗೆ ಮರಣದಂಡನೆ ಖಾಯಂ ಆಗುವುದೇ ಆಥವಾ ಇಲ್ಲವೇ ಎಂಬ ಬಗ್ಗೆ ದೇಶಾದ್ಯಂತ ಕುತೂಹಲ ಕೆರಳಿಸಿತ್ತು.



ಚಲಿಸುತ್ತಿದ್ದ ಬಸ್‍ನಲ್ಲಿ ಆರು ಕಾಮುಕರು ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿದ್ದ ಪ್ರಕರಣ ಬೆಳಕಿಗೆ ಬಂದ ನಂತರ ರಾಷ್ಟ್ರಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು.   ಐದು ವರ್ಷಗಳ ಹಿಂದೆ ಅಂದರೆ 2012ರ ಡಿಸೆಂಬರ್ 16ರಂದು ನಡೆದ ಈ ಬರ್ಬರ ಸಾಮೂಹಿಕ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆ ಘಟನೆಯಲ್ಲಿ ಸಂತ್ರಸ್ತ ಯುವತಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಡಿ.29ರಂದು ಸಿಂಗಪುರ್‍ನ ಆಸ್ಪತ್ರೆಯಲ್ಲಿ ಅಸುನೀಗಿದ್ದಳು.

ಈ ಪ್ರಕರಣದ ಆರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನಾಗಿದ್ದ ಕಾರಣ, ಮನಃಪರಿವರ್ತನಾ ಕೇಂದ್ರಗಳಿಗೆ ಕಳುಹಿಸಿ ಬಿಡುಗಡೆ ಮಾಡಲಾಗಿತ್ತು. ಇನ್ನೊಬ್ಬ ಪ್ರಮುಖ ಆರೋಪಿ ರಾಮ್‍ಸಿಂಗ್ 2013ರಲ್ಲಿ ಅತಿಭದ್ರತೆಯ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ. ಉಳಿದ ನಾಲ್ವರು ಆರೋಪಿಗಳಾದ ಮುಖೇಶ್, ಪವನ್, ವಿನಯ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಸಿಂಗ್‍ಗೆ ದೆಹಲಿ ಸಾಕೇತ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ನಾಲ್ವರೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮಾ.27ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ತೀರ್ಪು ಕಾಯ್ದಿರಿಸಿತ್ತು.

ದೆಹಲಿಯಲ್ಲಿ ಬಸ್‍ನಲ್ಲಿ ನಡೆದ ನಿರ್ಭಯಾ ಗ್ಯಾಂಗ್‍ರೇಪ್ ಘಟನೆಯಿಂದ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಂಸತ್ತಿಗೂ ಇದರ ಬಿಸಿ ತಟ್ಟಿದೆ. ಅತ್ಯಾಚಾರವನ್ನು ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಮಂತ್ರಿಗೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಲಾಗಿತ್ತು. ಇ-ಮೇಲ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin