ಚಳ್ಳಕೆರೆ ಬಳಿ ಭೀಕರ ಅಪಘಾತ : ಮದುವೆಗೆ ಹೊರಟವರು ಮಸಣ ಸೇರಿದರು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಚಳ್ಳಕೆರೆ,ಮೇ 7- ಟೆಂಪೋ ಟ್ರಾವಲೆರ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಇಬ್ಬರು ಮೃತಪಟ್ಟಿದ್ದು , ಇತರೆ ಆರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಬುಕ್ಲಾರಹಳ್ಳಿ ಬಳಿ ಇಂದು ಬೆಳಗಿನ ಜಾವ ನಡೆದಿದೆ.   35 ವರ್ಷದ ಮಂಜುನಾಥ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದರೆ 22 ವರ್ಷದ ರೋಜಾ ತಾಲ್ಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತರ ಆರು ಜನ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಬೆಂಗಳೂರಿನ ಆರು ಮಂದಿ ಟೆಂಪೋ ಟ್ರಾವಲರ್‍ನಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ಅಶೋಕ ಸಿದ್ದಾಪುರದಲ್ಲಿ ನಡೆಯುತ್ತಿದ್ದ ಸ್ನೇಹಿತನ ಮದುವೆಗೆಂದು ಹೊರಟಿದ್ದರು. ಬೆಂಗಳೂರಿನಿಂದ ಹೊರಟಿದ್ದ ಟೆಂಪೋ ಟ್ರಾವಲರ್ ತಳಕು ಠಾಣೆ ವ್ಯಾಪ್ತಿಯ ಬುಕ್ಲಾರಹಳ್ಳಿ ಬಳಿ ಬರುತ್ತಿದ್ದಾಗ ಬಳ್ಳಾರಿಯಿಂದ ಭತ್ತದ ಹೊಟ್ಟು ತುಂಬಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.   ಲಾರಿಯನ್ನು ಅಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ತಳಕು ಠಾಣೆ ಪೊಲೀಸರು ಚಾಲಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.   ಮೃತರಾದ ಮಂಜುನಾಥ್ ಮತ್ತು ರೋಜಾ ಹಾಗೂ ಗಾಯಾಳುಗಳ ಸಂಬಂಧಿಕರು ಈಗಾಗಲೇ ಚಳ್ಳಕೆರೆ ಆಸ್ಪತ್ರೆಗೆ ಧಾವಿಸಿದ್ದು , ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin