ವಿಕಲಚೇತನ ಮಹಿಳೆ ಮೇಲೆ ದೌರ್ಜನ್ಯ:ತಾಪಂ ಸದಸ್ಯರು-ಅಧಿಕಾರಿಗಳ ವಿರುದ್ಧ ಎಫ್.ಐ.ಆರ್.

ಈ ಸುದ್ದಿಯನ್ನು ಶೇರ್ ಮಾಡಿ

FIR-KNP
ಕನಕಪುರ, ಮೇ 8-ಖಾಸಗಿ ಜಮೀನೊಂದರಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದಲ್ಲದೆ ಜಮೀನಿನ ಮಾಲೀಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹಾಗು ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇರೆಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಜಾಮೀನು ರಹಿತ ಪ್ರಕರಣವನ್ನು ಸಾತನೂರು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.
ಸಾತನೂರು ಹೋಬಳಿ ಕುರಿಗೌಡನದೊಡ್ಡಿ ಗ್ರಾಮದ ವಿಕಲಚೇತನ ಮಹಿಳೆ ಜಯರತ್ನಮ್ಮ ರವರಿಗೆ ಸೇರಿದ ಜಮೀನಿನಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಅವರಿಗೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ ಹಿನ್ನೆಲೆಯಲ್ಲಿ ಕನಕಪುರ ಜೆ.ಎಂ.ಎಫ್.ಸಿ. ನ್ಯಾಯಾಲಯ ಸಾತನೂರು ಪೊಲೀಸರಿಗೆ ಇವರ ವಿರುದ್ಧ ಜಾಮೀನುರಹಿತ ಪ್ರಕರಣವನ್ನು ದಾಖಲಿಸಿಕೊಳ್ಳಲು ನಿರ್ದೇಶನ ನೀಡಿದ ಮೇರೆಗೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ.
ಸಾತನೂರು ಜಿಲ್ಲಾ ಪಂಚಾಯತಿ ಸದಸ್ಯ ಕುರುಬಳ್ಳಿದೊಡ್ಡಿ ಶಂಕರ್, ಕಬ್ಬಾಳು ತಾಲ್ಲೂಕು ಪಂಚಾಯತಿ ಸದಸ್ಯ ಧನಂಜಯ ಮತ್ತು ಇವರ ಕುಮ್ಮಕ್ಕಿನ ಮೇರೆಗೆ ಒಂದೇ ದಿನದಲ್ಲಿ ಖಾತೆ ಕಂದಾಯ ಬದಲಾವಣೆ ಮಾಡಿಕೊಟ್ಟ ಆರೋಪದ ಮೇರೆಗೆ ಕೋಡಿಹಳ್ಳಿ ಉಪತಹಶೀಲ್ದಾರ್ ಹಾಗು ಸಾತನೂರಿನಲ್ಲಿ ಪ್ರಭಾರ ಆರ್.ಆರ್.ಟಿ. ಶಿರಸ್ತೇದಾರ್ ಶಿವಾನಂದ, ರೆವಿನ್ಯೂ ಇನ್ಸ್‍ಪೆಕ್ಟರ್ ಬಿ.ಸಿ.ಬಸವಣ್ಣ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ್ ಜೊತೆಯಲ್ಲಿ ಗ್ರಾಮದ ರಾಜಕೀಯ ಹಿಂಬಾಲಕರಾದ ಹೊಂಬೇಗೌಡ, ಸಿದ್ದರಾಜು, ಕೆ.ಟಿ.ರಾಜು, ಕೆ.ಸಿ.ಪ್ರಕಾಶ, ಕೆ.ಟಿ.ತಿಮ್ಮೇಗೌಡ ರವರುಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಘಟನೆಯ ಹಿನ್ನೆಲೆ: ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬಳ್ಳಿದೊಡ್ಡಿ ನಿವಾಸಿ ಜಯರತ್ನಮ್ಮರ ಪಾಲಿಗೆ ಬಂದಿದ್ದ ಸರ್ವೆನಂಬರ್ 80ರಲ್ಲಿರುವ 2 ಎಕರೆ ಜಮೀನಿನಲ್ಲಿ 35 ವರ್ಷ ಅನುಭವ ಹೊಂದಿ ಜೀವನ ನಡೆಸಿಕೊಂಡು ಬರುತ್ತಿರುವ ಈ ಜಮೀನಿಗೆ ರಾಜಕೀಯ ದುರುದ್ದೇಶವನ್ನಿಟ್ಟುಕೊಂಡು ಜಮೀನಿನ ನಕಾಶೆಯಲ್ಲಿ ರಸ್ತೆ ಇಲ್ಲದಿದ್ದರೂ ಇವರ ಜೀವನೋಪಾಯಕ್ಕಿದ್ದ ಜಮೀನಿನಲ್ಲಿ ರಾಜಕೀಯ ವ್ಯಕ್ತಿಗಳು ಹಾಗು ಪೊಲೀಸರು ಶಾಮೀಲಾಗಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಅದಲ್ಲದೆ ಜಯರತ್ನಮ್ಮನವರಿಗೆ ಸೇರಿದ ಜಮೀನಿನ ಆಸ್ತಿಯನ್ನು ಪುನಃ ಅವರ ಮಾವನ ಹೆಸರಿಗೆ ಒಂದೇ ದಿನದಲ್ಲಿ ಖಾತೆ, ಕಂದಾಯ, ವಗೈರೆ ದಾಖಲೆಗಳನ್ನು ತಿದ್ದಿ ಕರ್ತವ್ಯ ಲೋಪ ಎಸಗಿರುವ ಕಂದಾಯ ಇಲಾಖೆ ಅಕಾರಿಗಳ ವಿರುದ್ಧವೂ ಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಮೀನಾಮೇಷ: ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ದಬ್ಬಾಳಿಕೆ ಹಾಗು ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಜೆಡಿಎಸ್‍ನ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿನಿಗೌಡ ಆರೋಪಿಸಿದ್ದಾರೆ.
ಅಮಾನತಿಗೆ ಆಗ್ರಹ: ಇದು ಜಾಮೀನು ರಹಿತವಾಗಿರುವುದರಿಂದ ಇವರಿಗೆ ಕಾನೂನಿನಲ್ಲಿ ಅವಕಾಶ ನೀಡದೆ ಸರಕಾರಿ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ನ್ಯಾಯಯುತ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin